ಮಂಗಳೂರು, ಮೇ 3:(ಕರ್ನಾಟಕ ವಾರ್ತೆ)-ಎಲ್ಲಾ ಅಧಿಕಾರಿಗಳು ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕಲ್ಲದೆ,ಹಾಜರಿ ಪುಸ್ತಕವನ್ನು ನಿರ್ವಹಿಸಿಬೇಕೆಂದು ಶಾಸಕ ಯೋಗೀಶ್ ಭಟ್ ಅವರು ತಹಸೀಲ್ದಾರರಿಗೆ ಇಂದು ಸೂಚನೆ ನೀಡಿದರು. ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳು ಗೈರುಹಾಜರಾದಾಗ ಸಚಿವರು ಈ ಎಚ್ಚರಿಕೆಯನ್ನು ನೀಡಿದರು.ಜನಸ್ಪಂದನ ಸಭೆಯಲ್ಲಿ ಪ್ರಸ್ತಾಪಿಸಲ್ಪಡುವ ಜನರ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ರೂಪಿಸಲು ಕ್ರಮಕೈಗೊಳ್ಳಲಾಗಿದೆ. ನಗರದ ಜನರು ಕಂದಾಯ ಇಲಾಖೆ ಸಂಬಂಧ ನೀಡಿದ ದೂರುಗಳಿಗೆ ಶಾಶ್ವತ ಪರಿಹಾರ ರೂಪಿಸಲು ಜಿಲ್ಲೆಯಲ್ಲಿ ಕಂದಾಯ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯ ಮುಖ್ಯಮಂತ್ರಿಗಳಿಂದ ಶ್ಲಾಘಿಸಲ್ಪಟ್ಟಿದೆ ಎಂದು ಶಾಸಕರಾದ ಎನ್. ಯೋಗೀಶ್ ಭಟ್ ಅವರು ಹೇಳಿದರು.
ಇಂದು ನಗರದ ಪುರಭವನದಲ್ಲಿ ಏರ್ಪಡಿಸಿದ ಜನಸ್ಪಂದನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡು ಹುಡುಕುವ ಭರವಸೆ ನೀಡಿದರು. ಸಮಗ್ರ ನಗರಾಭಿವೃದ್ಧಿ ನೀತಿ ಬಗ್ಗೆ ಜಿಲ್ಲಾ ಪ್ರಮುಖರು ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವರ ಜೊತೆ ಮಾತುಕತೆ ನಡೆಸಿ ಫಲಪ್ರದವಾಗಿದೆ ಎಂದರು. ಮಿನಿ ವಿಧಾನಸೌಧ ಕಾಮಗಾರಿ ಶೀಘ್ರ ಸಂಪೂರ್ಣ, ಕೋರ್ಟ್ ಕಟ್ಟಡ, ನಂತೂರು ತಲಪಾಡಿ ರಸ್ತೆ ನಿರ್ಮಾಣಕ್ಕೆ ಜಾಗ ವಶಪಡಿಸುವ ಬಗ್ಗೆಯೂ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಅರಿತು ಯೋಜನೆ ರೂಪಿಸಲು ಸಲಹೆ ಮಾಡುವುದಾಗಿ ಹೇಳಿದರು.ಕಂದಾಯ ಇಲಾಖೆ ಸಂಬಂಧ ಸಾರ್ವಜನಿಕರಿಂದ ವ್ಯಕ್ತವಾದ ಪ್ರಶ್ನೆಗಳಿಗೆ ಉತ್ತರಿಸಿದ ತಹಸೀಲ್ದಾರ್ ಮಂಜುನಾಥ್ ಅವರು, 32 ಗ್ರಾಮಗಳ ಮ್ಯುಟೇಷನ್ ಗೆ ಪೂರ್ತಿ ಜಮೀನು ನಕ್ಷೆ ಸಿದ್ಧಪಡಿಸಲಾಗಿದೆ. ತಂತ್ರಾಂಶಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಅರ್ಜಿ ಸಲ್ಲಿಸಿದ ಪ್ರಕಾರ ಮಾಹಿತಿ ನೀಡಲಾಗುವುದು. ಜಾತಿ ದೃಢಪತ್ರ ನೀಡಲು ಇದ್ದ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಭೂಮಾಪಕರ ಕೊರತೆ ನೀಗಿಸಲು, ಸರ್ವೇ ನಡಸಲು ಇದ್ದ ತೊಂದರೆಗಳನ್ನು ಆದಷ್ಟು ಶೀಘ್ರ ಪರಿಹರಿಸುವ ಭರವಸೆಯನ್ನು ಅವರು ನೀಡಿದರು.ವಿಧವಾ ಮಾಸಾಶನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ತಾಲೂಕು ಕಚೇರಿ ಮತ್ತು ಖಜಾನೆಯಲ್ಲಿನ ಸಂವಹನ ಕೊರತೆಯಿಂದ ತೊಂದರೆಯಾಗಿದ್ದು, ಅದನ್ನು ನಿವಾರಿಸಿ ಅರ್ಹರಿಗೆ ಸವಲತ್ತು ನೀಡಿ, ಅನರ್ಹರಿಗೆ ನೀಡಿರುವ ಸವಲತ್ತುಗಳನ್ನು ರದ್ದು ಪಡಿಸುವುದಾಗಿ ಹೇಳಿದರು.ಮಹಾ ನಗರಪಾಲಿಕೆ ಬಗ್ಗೆ ಸಾರ್ವಜ ನಿಕರಿಂದ ಹಲವು ದೂರುಗಳಿದ್ದು, ಎಲ್ಲ ದೂರುಗಳಿಗೆ ಪಾಲಿಕೆ ಆಯುಕ್ತರು ಉತ್ತರಿಸಿ ದರಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು. ರಸ್ತೆ ಕಾಮಗಾರಿ, ಒಳಚರಂಡಿ, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಜನರ ಸಮಸ್ಯೆಗೆ ಸ್ಪಂದಿಸಿದ ಅವರು, ನಗರದ ಪರಿಸ್ಥಿತಿ ಬಗ್ಗೆ ಪಾಲಿಕೆಗೆ ಸಂಪೂರ್ಣ ತಿಳುವಳಿಕೆಯಿದ್ದು, ನಿರೀಕ್ಷಿತ ಮಳೆಗಾಲದ ಮೊದಲು ಹೂಳೆತ್ತುವಿಕೆ, ಕೃತಕ ನೆರೆ ತಡೆಗೆ ಜಂಟಿ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿರುವ ಬಗ್ಗೆ ಹನುಮಂತ ಕಾಮತ್ ಅವರಿಗೆ ವಿವರಿಸಿದರು. ತೆಂಗಿನ ಗರಿ ಹಾಗೂ ಪ್ಲಾಸ್ಟಿಕ್ ನಿಂದಾಗಿ ಪ್ರಮುಖ ಒಳಚರಂಡಿಗಳು ಬ್ಲಾಕ್ ಆಗುತ್ತಿದ್ದು ಜೆಸಿಬಿ ಮುಖಾಂತರ ಇದನ್ನು ತೆರವು ಗೊಳಿಸಲಾಗುವುದು. ಗ್ಯಾಂಗ್ ಮನ್ ಗಳ ಸೇವೆಯನ್ನು ಅವಶ್ಯ ಸಂದರ್ಭದಲ್ಲಿ ಮಾತ್ರ ಬಳಸಿಕೊಳ್ಳಲಾಗುವುದು. ಅವ್ಯವಹಾರಕ್ಕೆ ಪಾಲಿಕೆಯಲ್ಲಿ ಅವಕಾಶವಿಲ್ಲ ಎಂದು ಅವರು ಜನಸ್ಪಂದನದಲ್ಲಿ ಜನರ ಸಮಸ್ಯೆಗೆ ಉತ್ತರಿಸಿದರು. ಉಳಿದಂತೆ ಮೆಸ್ಕಾಂ ಬಗ್ಗೆ, ಬಸ್ ಸಂಪರ್ಕದ ಬಗ್ಗೆ, ಅವರು ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವ ಬಗ್ಗೆ ಸಾರ್ವಜನಿಕರಿಂದ ದೂರುಗಳಿದ್ದವು.ಜಪ್ಪಿನಮೊಗರು ಸಬ್ ಸ್ಟೇಷನ್ ಸಂಬಂಧ ಬಂದ ದೂರನ್ನು ಆಲಿಸಿದ ಶಾಸಕರು, ಎಲ್ಲರೊಂದಿಗೆ ಸ್ಥಳ ತಪಾಸಣೆ ನಡೆಸುವ ಭರವಸೆಯನ್ನು ನೀಡಿದರು. ಈ ಸಂಬಂಧ ಡಿಸಿ ಕೋಟರ್್ನಲ್ಲಿ ದೂರು ದಾಖಲಾದ ಬಗ್ಗೆಯೂ ಮೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು. ನಗರದ ಫೀಡರ್ ಕೇಂದ್ರಗಳು ಓವರ್ ಲೋಡ್ ಆಗಿದ್ದು, ಕೆಎಸ್ ಆರ್ ಟಿಸಿ ಮತ್ತು ಜಪ್ಪಿನಮೊಗರಿನಲ್ಲಿ ಸಬ್ ಸ್ಟೇಷನ್ ವ್ಯವಸ್ಥೆಯಾಗದಿದ್ದರೆ ವಿದ್ಯುತ್ ಪೂರೈಕೆ ಮೇಲೆ ಪರಿಣಾಮ ಬೀರಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.
ಫುಟ್ ಪಾತಿನ ಮೇಲೆ ವಾಹನ ಪಾರ್ಕಿಗ್ ಬಗ್ಗೆ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಕೈಗೊಳ್ಳಬೇಕೆಂದು ಮೇಯರ್ ರಜನಿ ದುಗ್ಗಣ್ಣ ಅವರು ಸಲಹೆ ಮಾಡಿದರು. ಬಾಲಕಾರ್ಮಿಕರ ಬಗ್ಗೆ, ಹಣ್ಣು ಹಂಪಲಗಳನ್ನು ರಾಸಾಯಿನಿಕ ಬಳಸಿ ಹಣ್ಣಾಗಿಸುವುದನ್ನು ತಡೆಯುವ ಕುರಿತು, ಪಡಿತರ ಚೀಟಿಗಳ ಕುರಿತು ಸಭೆಯಲ್ಲಿ ಚರ್ಚೆಯಾಯಿತು.ಉಪ ಮೇಯರ್ ರಾಜೇಂದ್ರ ಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು, ಎಲ್ಲಾ ಅಧಿಕಾರಿಗಳು ಜನಸ್ಪಂದನದಲ್ಲಿ ಉಪಸ್ಥಿತರಿದ್ದರು.