Saturday, May 22, 2010

ವಿಮಾನ ಅಪಘಾತ ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ:ದುರಂತಕ್ಕೆ ಬಲಿಯಾದವರಿಗೆ 2ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ಪರಿಹಾರ

ಮಂಗಳೂರು,ಮೇ 22:ಇಂದು ನಸುಕಿನ ಜಾವ 6.05ಕ್ಕೆ ಬಜಪೆ ವಿಮಾನ ನಿಲ್ದಾಣ ಬಳಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮಡಿದವರಿಗಾಗಿ ರಾಜ್ಯ ಸಂಪುಟ ಸಭೆ ರದ್ದುಗೊಳಿಸಿ ರಾಜ್ಯ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿದೆ.ವಿಮಾನ ದುರಂತ ಸ್ಥಳಕ್ಕೆ ರಾಜ್ಯ ಮುಖ್ಯಮಂತ್ರಿಗಳು ಭೇಟಿ ನೀಡಿ ದುರಂತದಲ್ಲಿ ಸಾವಿಗೀಡಾದವರಿಗೆ 2 ಲಕ್ಷ ರೂ.ಪರಿಹಾರ ಮತ್ತು ಗಾಯಗೊಂಡವರಿಗೆ 50 ಲಕ್ಷ ರೂ. ನೆರವು ಧನ ಘೋಷಿಸಿದ್ದಾರೆ.

ದುರಂತದ ಬಗ್ಗೆ ಅಪಾರ ದು:ಖ ವ್ಯಕ್ತಪಡಿಸಿದ ಮುಖ್ಯ ಮಂತ್ರಿಗಳು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿ ಸುವು ದಾಗಿ ನುಡಿದರು. ದುರ್ಘಟನ ಸ್ಥಳಕ್ಕೆ ಮತ್ತು ವೆನ್ ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ದುರಂತದಲ್ಲಿ ಮಡಿದವರ ಕುಟುಂಬ ಗಳನ್ನು ಮತ್ತು ಆಪ್ತರನ್ನು ಸಂತೈಸಿದ್ದಾರೆ. ಮುಖ್ಯಮಂತ್ರಿ ಗಳೊಂದಿಗೆ ಗೃಹ ಸಚಿವರಾದ ಡಾ. ವಿ.ಎಸ್. ಆಚಾರ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೆಮಾರ್, ಸಂಸದ ಡಿ.ವಿ. ಸದಾನಂದ ಗೌಡ ಸೇರಿದಂತೆ ರಾಜ್ಯ ಪೋಲಿಸ್ ಮಹಾ ನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಗ್, ಅಗ್ನಿ ಶಾಮಕ ದಳದ ಜೀಜಾ ಹರಿಸಿಂಗ್, ಐಜಿ ಗೋಪಾಲ್ ಹೊಸೂರು, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಉಪ ಆಯುಕ್ತ ರಮೇಶ್ ಅವರು ಉಪಸ್ಥಿತರಿದ್ದರು.
ಇದುವರೆಗೆ ದೊರೆತ ಮಾಹಿತಿಯಂತೆ 1 ಮೃತ ದೇಹ ಘಟನಾ ಸ್ಥಳದಿಂದ ಹೊರತೆಗೆಯಬೇಕಿದ್ದು, 8ಜನ ಅದೃಷ್ಟವಶಾತ್ ಅವಘಡದಿಂದ ಪಾರಾದವರು ಅಪಾಯದಿಂದ ಪಾರಾಗಿದ್ದಾರೆಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.ತುರ್ತು ನಿರ್ವಹಣೆ ಹೊಣೆಯನ್ನು ಹಿರಿಯ ಅಧಿಕಾರಿ ಯೋಗೇಂದ್ರ ತ್ರಿಪಾಠಿ ಅವರು ವಹಿಸಿದ್ದು, ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಘಟನಾ ಸ್ಥಳದಲ್ಲೇ ಉಪಸ್ಥಿತರಿದ್ದು ಪರಿಹಾರ ಕ್ರಮಗಳ ಹೊಣೆಯನ್ನು ಹೊತ್ತಿದ್ದರು.