ಮಂಗಳೂರು, ಮೇ 26: ಬಜ್ಪೆ ಕೆಂಜಾರು ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಗುರುತು ಪತ್ತೆಯಾಗದೆ ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿದ್ದ 22 ಮೃತದೇಹಗಳಲ್ಲಿ 10 ದೇಹಗಳ ಗುರುತು ಪತ್ತೆಯಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಇಂದು ತಿಳಿಸಿದ್ದಾರೆ.
ತಮ್ಮ ಕಚೇರಿ ಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ದುರಂತ ಕ್ಕೀಡಾದ ವಿಮಾನದ ಇಬ್ಬರು ಸಿಬ್ಬಂದಿಗಳ ಮೃತದೇಹ ಸೇರಿದಂತೆ ಕರ್ನಾಟಕದ ಐದು ಹಾಗೂ ಕೇರಳದ 3 ಮೃತ ದೇಹಗಳ ಪತ್ತೆಯಾಗಿದೆ ಎಂದು ಅವರು ತಿಳಿಸಿದರು. ಗುರುತು ಪತ್ತೆಯಾದ ಮೃತ ದೇಹಗಳಲ್ಲಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮಂಗಳೂರಿನ ಅರುಣ್ ಜಾಯಲ್ ಫೆರ್ನಾಂಡಿಸ್, ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಉಡುಪಿಯ ಅಲ್ತಾಫ್ ಮುಹಮ್ಮದ್ ಮೌಲಾನ,ಕೊಲಾಸೊ ಆಸ್ಪತ್ರೆಯಲ್ಲಿ ದಾಂಡೇಲಿಯ ಮಹೇಂದ್ರ ರಮೇಶ್, ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ ಉಡುಪಿಯ ನಾವಿದ್ ಇಬ್ರಾಹಿಂ ಸಿರಾಜ್, ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮಂಗಳೂರಿನ ಮುಹಮ್ಮದ್ ಝಿಯಾದ್, ಸಿಟಿ ಆಸ್ಪತ್ರೆಯಲ್ಲಿ ಕಾಸರ ಗೋಡಿನ ರಿಜು ಜಾನ್, ಎಸ್ಸಿಎಸ್ ಆಸ್ಪತ್ರೆಯಲ್ಲಿ ಕಾಸರ ಗೋಡಿನ ಉಮೇಶನ್ ವಿಜಯನ್, ಸಿಟಿ ಆಸ್ಪತ್ರೆಯಲ್ಲಿ ಕಾಸರ ಗೋಡಿನ ಮುಹಮ್ಮದ್ ಬಶೀರ್ ಅವರ ಮೃತದೇಹಗಳಿವೆ.
ಉಳಿದಂತೆ ಗುರುತು ಪತ್ತೆಯಾಗಿರುವ ವಿಮಾನದ ಸಿಬ್ಬಂದಿಗಳಾದ ಪಶ್ಚಿಮ ಬಂಗಾಳದ ಯುಗಾಂತರ್ ರಾಣಾ ಅವರ ಮೃತದೇಹವು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಹಾಗೂ ಮಧ್ಯಪ್ರದೇಶದ ಮುಹಮ್ಮದ್ ಅಲಿ ಅವರ ಮೃತದೇಹವು ಎಸ್ಸಿಎಸ್ ಆಸ್ಪತ್ರೆಯಲ್ಲಿದೆ ಎಂದು ಸೀಮಂತ್ ಕುಮಾರ್ ಸಿಂಗ್ ವಿವರಿಸಿದರು. ಇನ್ನೂ 12 ಮೃತದೇಹಗಳ ಗುರುತು ಪತ್ತೆಯಾಗಬೇಕಿದ್ದು, ಶೀಘ್ರದಲ್ಲೇ ಡಿಎನ್ಎ ಫಲಿತಾಂಶ ವರದಿ ಸಿಗಲಿದೆ ಎಂದವರು ಹೇಳಿದರು.
18 ಮಂದಿ ಮೃತರ ಸಂಬಂಧಿಗಳು ಮಾತ್ರ ಡಿಎನ್ಎ ಪರೀಕ್ಷೆ:ಗುರುತುಪತ್ತೆಯಾಗದೆ ಬಾಕಿ ಉಳಿದಿದ್ದ 22 ಮೃತದೇಹಗಳ ಪತ್ತೆಗಾಗಿ ಕಳೆದ ರವಿವಾರ ಡಿಎನ್ಎ ಪರೀಕ್ಷೆಗಾಗಿ ರಕ್ತ ಮಾದರಿ ಹಾಗೂ ಫೋಟೋ ಸಂಗ್ರಹಿಸಲಾದ ಸಂದರ್ಭ ಮೃತರಿಗೆ ಸಂಬಂಧಿಸಿ 18 ಮಂದಿಯ ಕುಟುಂಬಗಳು ಮಾತ್ರ ಮುಂದೆ ಬಂದಿತ್ತು. ಕುಟುಂಬವೊಂದರ ತಲಾ ಇಬ್ಬರಂತೆ 18 ಕುಟುಂಬಗಳ ಒಟ್ಟು 36 ಮಂದಿಯ ರಕ್ತ ಮಾದರಿ ಹಾಗೂ ಫೋಟೋ ಸಂಗ್ರಹಿಸಿ ಡಿಎನ್ಎ ಪರೀಕ್ಷೆಗೆ ಹೈದಾರಾಬಾದ್ಗೆ ಕಳುಹಿಸಲಾಗಿತ್ತು ಎಂದು ಸೀಮಂತ್ ಕುಮಾರ್ ಸಿಂಗ್ ಇಂದು ತಿಳಿಸಿದರು.
ಅಮೂಲ್ಯ ವಸ್ತುಗಳು ಸಂಬಂಧಿತರಿಗೆ ಹಸ್ತಾಂತರಿಸಲು ಸಿದ್ಧತೆ:
ವಿಮಾನ ದುರಂತದ ಪ್ರದೇಶದಲ್ಲಿ ದೊರೆತ ವಿಮಾನದಲ್ಲಿದ್ದವರ ಅಮೂಲ್ಯ ವಸ್ತುಗಳಾದ ಚಿನ್ನಾಭರಣಗಳು, ನಗದು, ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ಪೊಲೀಸರು ಏರ್ ಇಂಡಿಯಾಕ್ಕೆ ಹಸ್ತಾಂತರಿಸಿದ್ದು, ಸಿಟಿ ವಲಯಕ್ಕೆ ಸಂಬಂಧಿಸಿ ಮಂಗಳೂರಿನ ಲಾಲ್ ಭಾಗ್ ನಲ್ಲಿರುವ ಏರ್ಇಂಡಿಯಾ ಕಚೇರಿ ಮೂಲಕ ಆ ವಸ್ತುಗಳನ್ನು ಸಂಬಂಧಿತರಿಗೆ ಹಸ್ತಾಂತರಿಸಲಾಗುವುದು. ದುಬೈನ ವಿಮಾನ ನಿಲ್ದಾಣದ ಕಚೇರಿಯಿಂದ ಪ್ರಯಾಣಿಕರ ಲಗೇಜ್ ಕುರಿತಾದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈ ಕುರಿತು ಪ್ರಕ್ರಿಯೆ ನಿನ್ನೆ ಮಧ್ಯಾಹ್ನದಿಂದ ಆರಂಭಗೊಂಡಿದೆ. ಸಂಬಂಧಿತರು ಈ ಬಗ್ಗೆ ಲಾಲ್ ಭಾಗ್ ಕಚೇರಿಯಲ್ಲಿ ಮಾಹಿತಿ ಒದಗಿಸಿ ತಮ್ಮ ವಸ್ತುಗಳನ್ನು ಪಡೆಯಬಹುದಾಗಿದೆ ಎಂದು ಸಿಂಗ್ ತಿಳಿಸಿದರು.
ದುರಂತದ ಸಂದರ್ಭ ಘಟನಾ ಸ್ಥಳದಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆ ಸಂದರ್ಭ ಸ್ವಯಂ ಕಾರ್ಯಕರ್ತರೆನಿಸಿಕೊಂಡವರು ಅಲ್ಲಿದ್ದ ಕೆಲವೊಂದು ಚಿನ್ನಾಭರಣಗಳನ್ನು ಎಗರಿಸಿದ್ದಾರೆಂಬ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಯಾವುದೇ ದೂರು ಬಂದಿಲ್ಲ. ಪೊಲೀಸ್ ಅಧಿಕಾರಿಗಳು ಕೂಡಾ ಇಂತಹ ಕೃತ್ಯ ಎಸಗಿದ್ದಾರೆಂಬ ಊಹಾಪೋಹಗಳು ಕೇಳಿಬಂದಿವೆ. ಮಾನವೀಯತೆಯ ನೆಲೆಯಲ್ಲಿ ಎಲ್ಲರೂ ಈ ಸಂದರ್ಭ ಘಟನಾ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರಿಂದ ಇಂತಹ ಘಟನೆ ನಡೆದಿರಲು ಸಾಧ್ಯವಿಲ್ಲ. ಹಾಗಿದ್ದರೂ ತಮ್ಮ ಪೊಲೀಸ್ ಸಿಬ್ಬಂದಿಗಳು ಸೇರಿ ಇಂತಹ ಕೃತ್ಯ ನಡೆದಿದೆ ಎಂಬ ಬಗ್ಗೆ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ನಕಲಿ ಪಾಸ್ ಪೋರ್ಟ್ ಬಗ್ಗೆ ದೂರು ಬಂದಿಲ್ಲ:ದುರಂತಕ್ಕೀಡಾದ ವಿಮಾನದಲ್ಲಿ ಕೆಲವರು ನಕಲಿ ಪಾಸ್ ಪೋರ್ಟ್ ನಲ್ಲಿ ಪ್ರಯಾಣಿಸುತ್ತಿದ್ದಾರೆಂಬ ಬಗ್ಗೆ ಆರೋಪ ಕೇಳಿ ಬಂದಿದೆ. ಆದರೆ ತಮಗೆ ಈ ಬಗ್ಗೆ ಈವರೆಗೆ ಯಾವುದೇ ದೂರು ಬಂದಿಲ್ಲ ಎಂದು ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದರು.ನಗರ ಎಸಿಪಿ ಬಿ,ಜೆ. ಭಂಡಾರಿ ಅವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.