ಮಂಗಳೂರು,ಮೇ 5:ದಕ್ಷಿಣ ಕನ್ನಡ ಜಿಲ್ಲೆಯ ಅದರಲ್ಲೂ ಮುಖ್ಯವಾಗಿ ಮಂಗಳೂರು ನಗರದಲ್ಲಿ ಬಡಜನತೆಯ ಹೆಸರಿನಲ್ಲಿ ರಿಯಲ್ ಎಸ್ಟೇಟ್ ನವರು ವ್ಯವಹರಿಸುತ್ತಿದ್ದು, ನಗರದಲ್ಲಿ 2-3 ಸೆನ್ಸ್ ಜಮೀನು ಖರೀದಿಸುವಾಗ ಜನರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು,ಜನರು ಅಧಿಕೃತ ಬಡಾವಣೆಗಳಲ್ಲಿ ಮಾತ್ರ ಮನೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾರೆ. ಜಾಗ ಖರೀದಿಗೆ ಸಂಬಂಧಿಸಿದಂತೆ ಜನರಿಗೆ ಸೂಕ್ತ ಮಾಹಿತಿ ನೀಡಲು ಮುಂದಿನ ಎರಡು ತಿಂಗಳೊಳಗಾಗಿ ಕಾರ್ಪೊರೇಷನ್,ಮೂಡಾ,ಕಂದಾಯ ಇಲಾಖೆ ಸಂಯುಕ್ತವಾಗಿ ಮಾಹಿತಿ ಕೇಂದ್ರ ಸ್ಥಾಪಿಸಿ ಪೂರಕ ಮಾಹಿತಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ. ಹಾಗೂ ಎರಡನೇ ಹಂತದ ಮಾಹಿತಿಯ ಬಳಿಕ ಜನರಿಗೆ ಅಪ್ರೂವ್ ಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ನುಡಿದರು.ಭೂಮಿಗೆ ಸಂಬಂಧಿ ಸಿದಂತೆ ಪ್ರತಿದಿನ ಕನಿಷ್ಠ 3 ದೂರುಗಳು ಕಚೇರಿಗೆ ಬರುತ್ತಿದ್ದು, ಎರಡ ರಿಂದ ಮೂರು ಎಕರೆ ಭೂಮಿಯನ್ನು ರೈತರಿಂದ ಖರೀದಿಸಿ ತುಂಡು ತುಂಡು ಮಾಡಿ ಆ ಜಮೀನಿಗೆ ರಸ್ತೆ, ಒಳಚರಂಡಿ ಯಾವುದೇ ವ್ಯವಸ್ಥೆ ಇಲ್ಲದೆ ಮಾರುವುದರಿಂದ ಇಂತಹ ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ವಿವರಿಸಿದರು.ಬಡ ಜನರು ಇಂತಹ ಮೋಸಕ್ಕೊಳಗಾಗದೆ ಎಚ್ಚರ ವಹಿಸಬೇಕೆಂದರು. ಆರ್ ಟಿ ಸಿ ಸಂಬಂಧ ಜನರಿಗೆ ಅನುಕೂಲವಾಗಲು ಮಂಗಳೂರಿನಲ್ಲಿ 3 ಭೂಮಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.