ಮಂಗಳೂರು,ಮೇ18:ಅಧಿಕಾರ ವಿಕೇಂದ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಅವರು ಹೇಳಿದರು.
ಅವರಿಂದು ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಗ್ರಾಮಾಡಳಿತಕ್ಕೆ ಒತ್ತು ನೀಡಲು ಈ ವರ್ಷವನ್ನು ಗ್ರಾಮಸಭಾ ವರ್ಷವೆಂದು ಘೋಷಿಸಲಾಗುವುದು ಎಂದ ಅವರು, ನೂತನವಾಗಿ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಡಳಿತ ನಡೆಸಲು ಅನುಕೂಲವಾಗುವಂತೆ ವಿಶೇಷ ತರಬೇತಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ,ಉಪಾಧ್ಯಕ್ಷರಿಗೆ 3 ದಿನಗಳ ಕಾಲ ಮೈಸೂರಿನ ಗ್ರಾಮೀಣಾಭಿವೃದ್ದಿ ತರಬೇತಿ ಕೇಂದ್ರದಲ್ಲಿ ತರಬೇತಿ ಹಾಗೂ ಉಳಿದ ಸದಸ್ಯರಿಗೆ ಸೆಟಲೈಟ್ ಮೂಲಕ ತರಬೇತಿ ನೀಡಲಾಗುವುದು ಎಂದರು. ಪಂಚಾಯಿತಿ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸಲು,ಫಲಾನುಭವಿ ಆಯ್ಕೆ ಮತ್ತು ಕ್ರಿಯಾಯೋಜನೆ ರೂಪಿಸಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದ ಅವರು, ವಿವಿಧ ಯೋಜನೆಗಳಡಿ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಸಾಕಷ್ಟು ದೊರೆಯುತ್ತಿದ್ದು, ಸದ್ವಿನಿಯೋಗವಾಗಬೇಕಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯೋಜನೆಗಳನ್ನು ರೂಪಿಸಿ ಹಣವನ್ನು ಉಪಯೋಗಿಸಲು ಅವಕಾಶ ನೀಡಲಾಗಿದೆ ಎಂದರು.
ಒಂಬಡ್ಸಮನ್ ನೇಮಕ:ಎನ್ ಆರ್ ಇ ಜಿ ಅವ್ಯವಹಾರ ದೂರಿನ ಬಗ್ಗೆ ಕ್ರಮ ಕೈಗೊಳ್ಳಲು ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನು ನೇಮಕ ಮಾಡಲಾಗುವುದು. ಈ ಯೋಜನೆಯಡಿ ಅಭಿವೃದ್ಧಿ ಬಗ್ಗೆ ಪರಿಶೀಲಿಸಲು ಇಸ್ರೋದ ನೆರವನ್ನು ಪಡೆದುಕೊಳ್ಳಲಾಗುವುದು ಎಂದರು.
ಇಲಾಖೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಸಿ ಅಂಡ್ ಆರ್ ಕಾನೂನು (ವೃಂದ ಮತ್ತು ನೇಮಕಾತಿ)ಜಾರಿ ತರಲು ಕರಡು ರಚಿಸಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣಾ ಜೆ. ಪಾಲೇಮಾರ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಸಿಇಓ ಶಿವಶಂಕರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.