Monday, May 10, 2010

12ರಂದು ಜಿಲ್ಲಾ ವ್ಯಾಪ್ತಿಯಲ್ಲಿ ಸಂತೆ,ಜಾತ್ರೆ ನಿಷೇಧ:ಜಿಲ್ಲಾಧಿಕಾರಿ ಆದೇಶ

ಮಂಗಳೂರು,ಮೇ10:ಮೇ 12ರಂದು ನಡೆಯಲಿರುವ ಗ್ರಾಮಪಂಚಾಯತ್ ಚುನಾವಣೆ ಸುವ್ಯವಸ್ಥಿತ ಹಾಗೂ ಶಾಂತಿಯುತವಾಗಿ ನಡೆಯಲು ಚುನಾವಣೆ ದಿನ ನಡೆಯಲಿರುವ ಸಂತೆ,ಜಾತ್ರೆ,ಉತ್ಸವ,ದನಗಳ ಜಾತ್ರೆ ಇತ್ಯಾದಿಗಳನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಆದೇಶ ಹೊರಡಿಸಿದ್ದಾರೆ.
ಮತದಾರರಿಗೆ ಮತದಾನದಂದು ಆಗುವ ಅನಾನು ಕೂಲತೆಗಳನ್ನು ತಪ್ಪಿಸುವ ದೃಷ್ಠಿಯಿಂದ ಪುತ್ತೂರು,ಮಂಗಳೂರು, ಬಂಟ್ವಾಳ ತಹಸೀಲ್ದಾರರ ವರದಿಯನ್ನಾಧರಿಸಿ ಆದೇಶ ಜಾರಿಗೊಳಿಸಲಾಗಿದೆ. ಮೂಡಬಿದ್ರೆ ಫಿರ್ಕಾದ ಬೆಳುವಾಯಿ ಗ್ರಾಮದಲ್ಲಿ ಬಂಟ್ವಾಳ ತಾಲೂಕಿನ ಬಂಟ್ವಾಳ ಫಿರ್ಕಾದ ಕಾವಳಪಡೂರು ಗ್ರಾಮದ ವಗ್ಗ ಎಂಬಲ್ಲಿ, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಫಿರ್ಕಾದ ನೆಲ್ಯಾಡಿಯಲ್ಲಿ ಮತ್ತು ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಹಾಗೂ ಅರಂತೋಡಿ ಎಂಬಲ್ಲಿ 12ರಂದು ನಡೆಯಲಿರುವ ಸಂತೆ,ಜಾತ್ರೆ, ಉತ್ಸವಗಳನ್ನು ನಿಷೇಧಿಸಲಾಗಿದೆ.
ಮದ್ಯ ಮಾರಾಟ ಬಂದ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಮುಕ್ತ ಹಾಗೂ ನ್ಯಾಯ ಸಮ್ಮತ,ನಿಷ್ಪಕ್ಷಪಾತ,ಶಾಂತಿ ಯುತವಾಗಿ ನಡೆಯಲು ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿ ಕಾರಿಯಾದ ಪೊನ್ನುರಾಜ್ ಅವರು ಮೇ11ರ ಬೆಳಗ್ಗೆ 7 ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ಮದ್ಯಮುಕ್ತ ಅವಧಿ ಎಂದು ಘೋಷಿಸಲಾಗಿದೆ. ಕರ್ನಾಟಕ ಅಬಕಾರಿ ಕಾಯಿದೆ 1965ರಡಿ ಕಾರ್ಯಾಚರಿಸುತ್ತಿರುವ ಸನ್ನದು ಆವರಣವನ್ನು ಹಾಗೂ ಮಾರಾಟ ಕೇಂದ್ರಗಳನ್ನು ಹಾಗೂ ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ.