ಮಂಗಳೂರು,ಮೇ14: ಮಂಗಳೂರು ವಿಮಾನ ನಿಲ್ದಾಣದ ನೂತನ ಏಕೀಕೃತ ಟರ್ಮಿನಲ್ ಭವನದ ಉದ್ಘಾಟನಾ ಸಮಾರಂಭ ಮೇ 15ರಂದು ಬೆಳಗ್ಗೆ 11 ಗಂಟೆಗೆ ಕೆಂಜಾರಿನಲ್ಲಿ ನಡೆಯಲಿದೆ.
ಕೆಂಜಾರಿನ 70 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ 500 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯ ಮೊದಲ ಹಂತ 147 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಹವಾ ನಿಯಂತ್ರಿತ ಸೌಲಭ್ಯ ಹೊಂದಿರುವ 18,200 ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ. ಏಕ ಕಾಲದಲ್ಲಿ 500 ಮಂದಿ ಪ್ರಯಾಣಿಕರು ಆಗಮಿಸುವ ಮತ್ತು ನಿರ್ಗಮನ ಸೌಲಭ್ಯ ಹೊಂದಿರುವ ನೂತನ ಏಕೀಕೃತ ಟರ್ಮಿನಲ್ ಭವನದೊಂದಿಗೆ 55 ಕೋಟಿ ರೂ., ವೆಚ್ಚದಲ್ಲಿ ನೂತನ ರನ್ ವೇ ಪೂರ್ಣಗೊಂಡಿದೆ.
ಸಿಸಿ ಕ್ಯಾಮರಾ, 28 ತಪಾಸಣಾ ಕೌಂಟರ್ ಸೇರಿದಂತೆ ಕಸ್ಟಮ್ಸ್ ಮತ್ತು ಎಮಿಗ್ರೇಶನ್ ಸೌಲಭ್ಯ ವಿಐಪಿ ಲಾಂಜ್, ರೆಸ್ಟೊರೆಂಟ್, ವಿದೇಶಿ ಪ್ರಯಾಣಿಕರಿಗೆ ಪ್ರತ್ಯೇಕ ವ್ಯವಸ್ಥೆ, ಹವಾನಿಯಂತ್ರಿತ ಏರೋ ಬ್ರಿಡ್ಜ್ ಅಳವಡಿಸಲಾಗಿದೆ. ಇನ್ ಲೈನ್ ಎಕ್ಸ್ ರೇ ಬ್ಯಾಗೇಜ್ ಸಿಸ್ಟಮ್ ಹೊಂದಿದೆ. 15 ರಂದು ಬೆಳಗ್ಗೆ 11 ಗಂಟೆಗೆ ಭಾರತ ಸರ್ಕಾರದ ನಾಗರೀಕ ವಿಮಾನ ಯಾನ ಖಾತೆಯ ರಾಜ್ಯ ಸಚಿವ ಪ್ರಫುಲ್ ಪಟೇಲ್ ನೂತನ ಏಕೀಕೃತ ಟರ್ಮಿನಲ್ ಭವನ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಾಲ್ಗೊಳ್ಳುವರು. ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಸಂಸತ್ ಸದಸ್ಯ (ರಾಜ್ಯ ಸಭೆ) ಆಸ್ಕರ್ ಫೆರ್ನಾಂಡಿಸ್, ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ಶಾಸಕರಾದ ಅಭಯಚಂದ್ರ ಜೈನ್, ಮೇಯರ್ ರಜನಿದುಗ್ಗಣ್ಣ ಗೌರವಾನ್ವಿತ ಅತಿಥಿಗಳಾಗಿರುವರು.