ಮಂಗಳೂರು,ಜ.21:ರಾಜ್ಯ ಸರ್ಕಾರ ಆಡಳಿತದ ಎಲ್ಲ ಹಂತಗಳಲ್ಲೂ ಕನ್ನಡ ಬಳಕೆ ಕಡ್ಡಾಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದರು.
ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆಡಳಿತ ತರಬೇತಿ ಸಂಸ್ಥೆ ಮೈಸೂರು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕನ್ನಡ ವಿವಿ ಹಂಪಿಯ ಸಹ ಯೋಗದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಏಕ ಕಾಲದಲ್ಲಿ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ 3 ದಿನಗಳ ತರಬೇತಿ ಕಾರ್ಯ ಕ್ರಮವನ್ನು ವಿಡಿಯೋ ಸಂವಾದದ ಮೂಲಕ ಉದ್ಘಾಟಿಸಿ ಮಾತನಾಡಿದರು.
ಭಾಷಾವಾರು ಪ್ರಾಂತ್ಯ ರಚನೆಯಾಗಿ 5 ದಶಕಗಳೇ ಕಳೆದಿದ್ದು, ಕನ್ನಡವೇ ಆಡಳಿತ ಭಾಷೆ ಎಂದು ಆದೇಶ ಹೊರಡಿಸಿದ್ದರೂ ಸಂಪೂರ್ಣ ಕನ್ನಡ ಅನುಷ್ಠಾನ ವಾಗದಿರುವುದಕ್ಕೆ ಖೇದ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಇನ್ನು ಮುಂದೆ ಜೌದಾರ್ಯ, ರಿಯಾಯಿತಿಗಳಿಲ್ಲ; ಆಡಳಿತದಲ್ಲಿ, ನಾಮಫಲಕಗಳಲ್ಲಿ, ವ್ಯವಹಾರಗಳಲ್ಲಿ ಕನ್ನಡ ಬಳಕೆ ಕಡ್ಡಾಯ. ಆದೇಶ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದರು.
ಕನ್ನಡ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತ್ರಿಭಾಷಾ ಸೂತ್ರ ಒಪ್ಪಿರುವ ನಾವು, ಕನ್ನಡೀಕರಣಕ್ಕೆ ಸಂಪೂರ್ಣ ಸಹಕಾರ ನೀಡಬೇಕು.ಎಲ್ಲ ಜಿಲ್ಲಾಧಿಕಾರಿಗಳು ಕನ್ನಡಪ್ರೇಮಿಗಳಾಗಬೇಕೆಂದರು. ಮುಖ್ಯಮಂತ್ರಿಗಳು ದಾವಣಗೆರೆ,ಬೀದರ್, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲಾಧಿಕಾರಿಗಳೊಂದಿಗೆ ಕನ್ನಡ ಅನುಷ್ಠಾನದ ಬಗ್ಗೆ ಸಂವಾದ ನಡೆಸಿದರು.
ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮಾರ್ಗದರ್ಶನ ನೀಡಿದರು. ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್ ಅವರು ವಂದಿಸಿದರು.