ಮಂಗಳೂರು,ಜ.8:ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಹೋಟೆಲ್ ಗೋಲ್ಡ್ ಫಿಂಚ್ ಮತ್ತು ಮಹಾರಾಜ ಹೋಟೆಲ್ ನವರು ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲೇ ಎಸೆಯುತ್ತಿದ್ದು, ಮನಾಪ ಸಂಬಂಧಪಟ್ಟವರಿಗೆ ಈಗಾಗಲೇ ನೋಟೀಸು ನೀಡಿದ್ದರೂ ತ್ಯಾಜ್ಯ ಎಸೆಯುವ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಿಲ್ಲ ಎಂಬುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು ಇದೇ ರೀತಿ ಕಾನೂನು ಉಲ್ಲಂಘಿಸಿದರೆ ಹೋಟೇಲುಗಳ ಪರವಾನಿಗೆಯನ್ನು ರದ್ದು ಪಡಿಸಲು ಕ್ರಮ ಕೈಗೊಳ್ಳಲಾಗುವುದೆಂದು ದ.ಕ.ಜಿಲ್ಲಾಧಿಕಾರಿ ಪೊನ್ನುರಾಜ್ ಅವರು ಎಚ್ಚರಿಕೆ ನೀಡಿದ್ದಾರೆ.
ಬಂಟ್ವಾಳ ನಗರ ವ್ಯಾಪ್ತಿಯ ಬಿ.ಸಿ.ರೋಡಿನಲ್ಲಿರುವ ಹೋಟೆಲ್ ಶ್ರೀನಿವಾಸ ಮತ್ತು ರಂಗೋಲಿಯವರು ರಸ್ತೆ ಬದಿಗಳಲ್ಲಿ ಹೋಟೇಲಿನ ತ್ಯಾಜ್ಯವನ್ನು ಹಾಕುತ್ತಿದ್ದು, ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದಾರೆ;ಈ ಬಗ್ಗೆ ಬಂಟ್ವಾಳ ಮುಖ್ಯಾಧಿಕಾರಿಗೆ ನಿರ್ದೇಶನ ನೀಡಲಾಗಿದ್ದು,ಇದೇ ಕ್ರಮ ಮುಂದುವರಿದರೆ ಹೋಟೇಲು ಮತ್ತು ಮುಖ್ಯಾಧಿಕಾರಿಯವರ ಮೇಲೂ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.
ಬೃಹತ್ ಹೋಟೆಲ್ ಗಳು, ಸಂಸ್ಥೆಗಳು ತ್ಯಾಜ್ಯ ವಸ್ತುಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ತಾವೇ ಡಂಪಿಂಗ್ ಯಾರ್ಡ್ ಗಳಿಗೆ ರವಾನಿಸಲು ಸೂಕ್ತ ಕ್ರಮಕೈಗೊಳ್ಳಲು ಹಾಗೂ ಶುಚಿತ್ವ ಕಾಪಾಡಲು ಸೂಚನೆ ನೀಡಲಾಗಿದೆ.
ಮಂಗಳೂರು ನಗರದಾದ್ಯಂತ ಜೀವವಿಮಾ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳ ವಿಮಾ ಏಜೆಂಟರು ತಮ್ಮ ಸಂಸ್ಥೆಯ ಪ್ರಚಾರಕ್ಕೆ ಭಿತ್ತಿ ಪತ್ರಗಳನ್ನು ಹಾಕಿದ್ದು,ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ.ಸಾರ್ವಜನಿಕ ಗೋಡೆಗಳಲ್ಲಿ ಬೇಕಾಬಿಟ್ಟಿಯಾಗಿ ಅಂಟಿಸುವುದು ಮತ್ತು ಕೈಬರಹದಲ್ಲಿ ಬರೆಯುವುದನ್ನು ಕಂಡು ಬಂದರೆ ಅಂತಹವರ ವಿರುದ್ದ ಸಾರ್ವಜನಿಕ ಸೊತ್ತು ವಿರೂಪಗೊಳಿಸುವುದನ್ನು ತಡೆಗಟ್ಟುವ ಕಾಯ್ದೆಯ ಪ್ರಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಯಾವುದೇ ಭಿತ್ತಿ ಪತ್ರಗಳನ್ನು ಅಂಟಿಸಬೇಕಾದಲ್ಲಿ ಸಂಬಂಧಪಟ್ಟ ಪಾಲಿಕೆ ಹಾಗೂ ಪುರಸಭೆಗಳಿಂದ ಅನುಮತಿ ಪಡೆಯಲು ಸೂಚಿಸಲಾಗಿದ್ದು, ಜಾಹೀರಾತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ ನೀಡಲಾಗಿದೆ. ನಗರದ ಶುಚಿತ್ವ ಹಾಗೂ ಸುಂದರೀಕರಣದ ಬಗ್ಗೆ ಎಲ್ಲ ನಾಗರೀಕರ ನೆರವನ್ನು ಜಿಲ್ಲಾಧಿಕಾರಿಗಳು ಕೋರಿದ್ದಾರೆ.