ಮಂಗಳೂರು,ಜ.18: ರಾಜ್ಯದಲ್ಲಿ ಸಹಕಾರಿಗಳಿಂದ ಸಾಕಷ್ಟು ಅಭಿವೃದ್ಧಿ ಕಾರ್ಯವಾಗಿದೆ; ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿ ಸಂಘಸಂಸ್ಥೆಗಳು ಕಾರ್ಯನಿರ್ವಹಿಸಿವೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಅವರಿಂದು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಲಿ.ನ ಶತ ಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪರಿಶ್ರಮ,ಪ್ರಾಮಾಣಿಕತೆ ,ಗುರಿತಲುಪುವ ಛಲ ಇದ್ದರೆ ಯಶಸ್ಸು ಸಾದ್ಯ ಎಂಬುದಕ್ಕೆ ಈ ಸಹಕಾರಿ ಬ್ಯಾಂಕ್ ಉತ್ತಮ ಉದಾಹರಣೆ ಎಂದ ಅವರು,ಕ್ರಿಯಾಶೀಲವಾಗಿ ಒಂದು ಶತಮಾನ ಪೂರೈಸಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಹಕಾರಿ ಆಂದೋಲನದ ಇತಿಹಾಸ,ಸಾಮಾಜಿಕ ಬದ್ಧತೆಯ ಬಗ್ಗೆ ಮಾತನಾಡಿದ ಅವರು,ಸಮಾನತೆ ಮತ್ತು ಸದೃಢ,ಸುವ್ಯವಸ್ಥಿತ ವ್ಯವಸ್ಥೆಗೆ ಸಹಕಾರಿಗಳ ಕೊಡುಗೆಯನ್ನು ಪ್ರಶಂಸಿಸಿದರು.ರಾಜ್ಯ ಸರ್ಕಾರ ರೈತರ,ವಿದ್ಯಾರ್ಥಿಗಳಿಗೆ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ರೂಪಿಸಿದ ಯೋಜನೆಗಳು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.
ಸರ್ಕಾರದ ಖಜಾನೆಯಲ್ಲಿ ಆಭಿವೃದ್ಧಿ ಯೋಜನೆ ಗಳಿಗೆ ಹಣದ ಕೊರತೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು, ಸೋರಿಕೆ ತಡೆಗಟ್ಟಿ ಹಣ ಕಾಸಿನ ಸುವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದೆ ಎಂದರು. ಹಿರಿಯ ಸಹಕಾರಿಗಳಾದ ಪೆರಾಜೆ ಶ್ರೀನಿವಾಸ ರಾವ್, ನರಸಿಂಹನಾಯಕ್ ರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿ ಅಭಿನಂದಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಸದಸ್ಯರಾದ ಡಿ.ವಿ.ಸದಾನಂದಗೌಡ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೇಮಾರ್ ಅವರು ಮೊಳಹಳ್ಳಿ ಶಿವರಾಯರ ಜೀವನಚರಿತ್ರೆ ಪುಸ್ತಕ ಬಿಡುಗಡೆ ಮಾಡಿದರು.
ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯೋಗೀಶ್ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪುತ್ತೂರು ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು,ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.