ಮಂಗಳೂರು,ಜ.19:ಅಪಘಾತಗಳಿಗೆ ಯಾರು ಕಾರಣ ಎಂಬುದರ ಕುರಿತು ಚರ್ಚಿಸದೆ ಹೇಗೆ ಅಪಘಾತಗಳನ್ನು ತಪ್ಪಿಸಬಹುದು ಎಂಬುದರ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ನಿಟ್ಟೆ ವಿ.ವಿ.ಯ ಡೀನ್ ಡಾ.ಶಾಂತರಾಮ ಶೆಟ್ಟಿ ಹೇಳಿದರು.
ಅವರಿಂದು 21 ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ 2010ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಇಂತಹ ಆಚರಣೆಗಳಿಂದ ಸಾಮೂಹಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳು ಹೆಚ್ಚಬೇಕು; ಅಪಘಾತಗಳ ಸಂಖ್ಯೆ ಕಡಿಮೆಯಾಗಬೇಕು ಹಾಗಾದಾಗ ಮಾತ್ರ ಆಚರಣೆಗಳು ಸಾರ್ಥಕ ಎಂದು ಹೇಳಿದರು.ಅಪಘಾತಗಳ ತೀವ್ರತೆಯ ಬಗ್ಗೆ ವೈಯಕ್ತಿಕ ಅನುಭವಗಳನ್ನು ಅವರು ಹಂಚಿಕೊಂಡರು.
ಆರ್ ಟಿ ಒ ಪುರುಷೋತ್ತಮ ಜೆ. ಸ್ವಾಗತಿಸಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್ .ರಮೇಶ್,ಬಸ್ಸುಮಾಲಕರ ಸಂಘದ ಅಧ್ಯಕ್ಷರಾದ ರಾಜವರ್ಮ ಬಲ್ಲಾಳ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತಾ ಸಂಬಂಧ ಏರ್ಪಡಿಸಲಾಗಿದ್ದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಅಪಘಾತ ರಹಿತ ಚಾಲಕರನ್ನು ಸನ್ಮಾನಿಸಲಾಯಿತು.