Friday, December 11, 2009

ಶಿಕ್ಷಣ ಮತ್ತು ಸಂಶೋಧನೆಗಳಿಂದ ದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಸಾಧ್ಯ:ಡಾ.ವಿ.ಎಸ್.ಆಚಾರ್ಯ

ಮಂಗಳೂರು,ಡಿ.11:ನಾಗಾಲೋಟದಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ಬೆಳವಣಿಗೆಗಳು ಜಗತ್ತಿನಲ್ಲಾಗುತ್ತಿದ್ದು,ನಮ್ಮ ದೇಶವು ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು; ನಮ್ಮಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ಇನ್ನಷ್ಟು ಅಭಿವೃದ್ಧಿಹೊಂದಬೇಕು;ಇಲ್ಲದಿದ್ದರೆ ನಾವು ಎಲ್ಲರಿಗಿಂತ ಹಿಂದುಳಿದುಬಿಡುತ್ತೇವೆ ಎಂದು ಡಾ.ವಿ.ಎಸ್.ಆಚಾರ್ಯ ಹೇಳಿದರು..
ಅವರು ಇಂದು ಸುರತ್ಕಲ್ ನ ಎನ್ ಐ ಟಿ ಕೆಯ ಸಿಲ್ವರ್ ಜ್ಯುಬಿಲಿ ಅಡಿಟೋರಿಯಂನಲ್ಲಿ ಆಯೋಜಿಸಲಾದ 24ನೇ ಇಂಡಿಯನ್ ಇಂಜಿನಿಯರಿಂಗ್ ಕಾಂಗ್ರೆಸ್ ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಸಂಶೋಧನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿ,ಜನಸಾಮಾನ್ಯರಿಗೆ ನೆರವಾಗುವಂತಿರಬೇಕು ಎಂದ ಅವರು, ಉತ್ತಮ ಸಿವಿಲ್ ಇಂಜಿನಿಯರ್ ಗಳ ಅಗತ್ಯ ಸಮಾಜಕ್ಕಿದೆ. ಇಂದು ವಿದ್ಯಾರ್ಥಿಗಳು ಪ್ರಥಮವಾಗಿ ವೈದ್ಯಕೀಯ ಕ್ಷೇತ್ರವನ್ನು ಆರಿಸಿದರೆ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಂಪ್ಯೂಟರ್ ಮತ್ತಿತರ ಕೋರ್ಸ್ ಗಳಿಗೆ ಆದ್ಯತೆ ನೀಡುತ್ತಾರೆ. ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ಇರುವ ಪ್ರಸಕ್ತ ಸನ್ನಿವೇಶದಲ್ಲಿ ಸಿವಿಲ್ ಇಂಜಿನಿಯರ್ ಗಳಿಗಾಗಿಯೇ ಪ್ರತ್ಯೇಕ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು..
ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದ್ದು, 160 ಇಂಜಿನಿಯರಿಂಗ್ ಕಾಲೇಜುಗಳು, 40ಮೆಡಿಕಲ್ ಕಾಲೇಜುಗಳನ್ನು ಹೊಂದಿದೆ.ಆದರೂ ಸರ್ ಎಂ ವಿಶ್ವೇಶ್ವರಯ್ಯರಂತಹ ಇಂಜಿನಿಯರ್ ಗಳು ಮತ್ತೆ ಬರಲಿಲ್ಲ ಎಂಬ ವಿಷಾದವನ್ನು ಅವರು ವ್ಯಕ್ತಪಡಿಸಿದರು. ಶಿಕ್ಷಣ ಮತ್ತು ಸಂಶೋಧನೆಗಳಿಂದ ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರುಸಮಾರಂಭದ ಅಧ್ಯಕ್ಷತೆಯನ್ನು ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ನ ಮದನಲಾಲ್ ವಹಿಸಿದ್ದರು.ಅ
ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದೇಶ ಎದುರಿಸುತ್ತಿರುವ ವಿದ್ಯುತ್ ಶಕ್ತಿಯ ಬಗ್ಗೆ ಪ್ರಸ್ತಾಪಿಸಿ,ನೇಪಾಳದಂತಹ ದೇಶಗಳೊಂದಿಗೆ ದ್ವಿಪಕ್ಷೀಯ ಮಾತುಕತೆಯಿಂದ ನಮ್ಮ ಪ್ರಸಕ್ತ ವಿದ್ಯುತ್ ಕೊರತೆ ನೀಗಿಸಲು ಸಾಧ್ಯ ಎಂದರು.ಪರ್ಯಾಯ ಇಂಧನ ಶಕ್ತಿಗಳ ಬಗ್ಗೆ ನಡೆಸುತ್ತಿರುವ ಸಂಶೋಧನೆಯನ್ನು ವಿವರಿಸಿದರು. ಎನ್ ಐಟಿಕೆಯ ಸಂದೀಪ್ ಸಂಚೇತಿ ಸ್ವಾಗತಿಸಿದರು. ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 98 ಸಂಶೋಧನಕಾರರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು