ಮಂಗಳೂರು,ಡಿ.1:ಸಮಾಜದಲ್ಲಿ ಮಾರಕ ರೋಗವೆಂದೇ ಬಿಂಬಿತವಾಗಿರುವ ಏಡ್ಸ್ ಬಗ್ಗೆ ಅರಿವು ಮೂಡಿಸುವುದು ಪ್ರತಿಯೊಬ್ಬರ ಹೊಣೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅವರು ಹೇಳಿದರು.
ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಹಾಗೂ ಭಾರತೀಯ ವೈದ್ಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಮಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಏಡ್ಸ್ ದಿನ-2009 ನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ರೋಗ ಸೋಂಕಿತರಿಗೆ ಸಾಮಾಜಿಕ ಬಹಿಷ್ಕಾರ ಸಲ್ಲದು;ಆರೋಗ್ಯ ಮತ್ತು ಲೈಂಗಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು. ಎಚ್ ಐ ವಿ ರೋಗಿಗಳಿಗೆ ಪೌಷ್ಠಿಕ ಆಹಾರದ ಕೊರತೆ ನೀಗಿಸಲು ರಾಷ್ಟ್ರೀಯ ಗ್ರಾಮೀಣ ಅಭಿಯಾನ ಯೋಜನೆಯಡಿ ಕ್ರಮ ಕೈಗೊಳ್ಳಲಾಗುವುದಲ್ಲದೆ, ರೋಗ ಪೀಡಿತರಿಗೆ ಸರ್ಕಾರದಿಂದ ದೊರೆಯುವ ಎಲ್ಲ ನೆರವುಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಕೇವಲ ದಿನಾಚರಣೆಗಳಿಂದಷ್ಟೆ ಜಾಗೃತಿ ಸಾಧ್ಯವಿಲ್ಲ;ವೈಯಕ್ತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಸಾಮಾಜಿಕ ಅನಿಷ್ಠಗಳನ್ನು ನೀಗಿಸಬೇಕು. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಮುಖಾಂತರ, ಸಂಘಟನೆಗಳ ನೆರವಿನೊಂದಿಗೆ ಜನರಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸುವುದಲ್ಲದೆ, ಸರ್ಕಾರದ ಸೌಲಭ್ಯಗಳು ಅರ್ಹರಿಗೆ ಲಭಿಸುವಂತಾಗಬೇಕು.ಏಡ್ಸ್ ನಂತಹ ರೋಗ ಬಾರದಂಗತೆ ತಡೆಯಲು ಜನರಲ್ಲಿ ತಿಳುವಳಿಕೆ ಮತ್ತು ಅರಿವು ಮೂಡಿಸುವುದಕ್ಕೆ ಆದ್ಯತೆ ನೀಡಬೇಕಾದ ಅಗತ್ಯತೆ ಇದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ವೈದ್ಯ ಸಂಘದ ಡಾ.ಮೋಹನ್ ದಾಸ್ ಭಂಡಾರಿ ಅವರು, ಯುವಜನಾಂಗವನ್ನು ಜಾಗೃತಿಗೊಳಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹೊಂಗಿರಣ ಪಾಸಿಟಿವ್ ನೆಟ್ ವರ್ಕ್
ನ ಸೀಮಾ ಮಥಾಯಸ್ ಅವರು, ಹೊಂಗಿರಣ ಸಂಸ್ಥೆ ಆರಂಭಿಸಿ ಪಾಸಿಟಿವ್ ವ್ಯಕ್ತಿಗಳಲ್ಲಿ ಜೀವ ತುಂಬುವ ಕೆಲಸ ಮಾಡುತ್ತಿರುವ ಬಗೆಯನ್ನು ಎಳೆಎಳೆಯಾಗಿ ವಿವರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಡಾ.ರತಿದೇವಿ ಅವರು,ಏಡ್ಸ್ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಬರೆದ ಏಡ್ಸ್-ಅಡೋಲಸೆನ್ಸ್ ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್. ಜಗನ್ನಾಥ್ ಸ್ವಾಗತಿಸಿದರು.ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಕಿಶೋರ್ ಕುಮಾರ್ ಎಂ. ಪ್ರಾಸ್ತಾವಿಕ ನುಡಿದರು. ಡಿ ಎಂ ಒ ಪ್ರಭುದೇವ್ ವಂದಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಏಡ್ಸ್ ರೋಗದ ಬಗ್ಗೆ ಸಮಾಜಿಕ ಜಾಗೃತಿ ಮೂಡಿಸುನ ನಿಟ್ಟಿನಲ್ಲಿ ನಗರದ ಬಾವುಟಗುಡ್ಡೆಯಿಂದ ಸಭಾ ಕಾರ್ಯಕ್ರಮ ನಡೆದ ಐ ಎಂ ಎ ಸಭಾಂಗಣದವರೆಗೆ ಏಡ್ಸ್ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.