ಉಜಿರೆ,ಡಿಸೆಂಬರ್ 12.ಇಲ್ಲಿ ನಡೆಯುವ ವಿಶ್ವ ತುಳು ಸಮ್ಮೇಳನಕ್ಕೆ ನಾಡಿನ ಮೂಲೆಮೂಲೆಯಿಂದ ಜನ ಸಾಗರವೇ ಹರಿದು ಬರುತ್ತಿದೆ.ಇಲ್ಲಿನ ಪ್ರಮುಖ ಆಕರ್ಷಣೆ ತುಳುವ ಸಂಸ್ಕೃತಿಯನ್ನು ಬಿಂಬಿಸುವ ತುಳು ಗ್ರಾಮ,ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ನೇತ್ರತ್ವದಲ್ಲಿ ಉಜಿರೆಯ ಅಜ್ಜರ ಕಲ್ಲಿನಲ್ಲಿಯ 8 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾದ ತುಳುವರ ಮಾದರಿ ತುಳು ಗ್ರಾಮ ಸಮ್ಮೇಳನದ ಕೇಂದ್ರ ಬಿಂದುವಾಗಿದೆ.
ಸ್ವಚ್ಚ ದೇಸಿಯ ಕಲೆಯ ತವರೂರಾದ ಇಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ತುಳು ಗ್ರಾಮವನ್ನು ಪ್ರವೇಶಿಸುನ ಮಂದಿಗೆ ಅದು ಪ್ರದರ್ಶನದ ಬದಲಾಗಿ ದಶಕಗಳ ಹಿಂದೆ ತುಳುವರಲ್ಲಿ ಇದ್ದ ಜೀವನ ಕ್ರಮದ ಸಹಜತೆ, ಮತ್ತು ಜೀವಂತಿಕೆಯನ್ನು ತೋರಿಸುತ್ತಿದೆ. ಪ್ರಕೃತಿ ಸಹಜದತ್ತವಾದ ಕಲ್ಲು ಬಂಡೆಗಳು, ತಗ್ಗು ದಿನ್ನೆಗಳು,ಹಸಿರು ಹುಲ್ಲು ಹಾಸಿದ ಸುಂದರ ಪರಿಸರ,ಇವೆಲ್ಲವೂ ತುಳು ಗ್ರಾಮವನ್ನು ಸಹಜವಾಗಿಯೇ ನೆನಪಿಸುವಂತಿವೆ.ಗುತ್ತಿನ ಮನೆ,ಹಳ್ಳಿಯ ಮುಖ್ಯಸ್ಥ ಪಟೇಲರ ಮನೆ,ಊರಿನ ದೈವಸ್ಥಾನ,ಶಾಲೆ,ಅದಲ್ಲದೇ ಹಳ್ಳಿ ವೈದ್ಯರು,ಅಂಚೆ ಕಚೇರಿ,ಗರಡಿ ಮನೆಗಳು ಎಲ್ಲವೂ ಇಲ್ಲಿದೆ.ಅಪ್ಪಟ ಹುಳಿ ಮಣ್ಣಿನಿಂದ ನಿರ್ಮಾಣ ಮಾಡಿ , ಸೆಗಣಿ ಗುಡಿಸಿ, ಮಸಿ ಓರೆಸಿ ಸಜ್ಜುಗೊಳಿಸಿದ ಮನೆ,ಮನೆಯ ಕೋಣೆಯಲ್ಲಿ ತರಕಾರಿಗಳನ್ನು ತೂಗು ಹಾಕಿದ್ದು,ಭತ್ತದ ಗದ್ದೆಗಳಿಗೆ ನೀರುಣಿಸುವ ಅಪರೂಪದ ಏತ ನೀರಾವರಿ ಹಳ್ಳಿ ಸೊಗಡನ್ನು ನೆನಪಿಸುತ್ತಿದೆ.
ಈ ಗ್ರಾಮದ ವಿವಿಧ ಜಾತಿ ವರ್ಗದ ಜನರ ಮಧ್ಯೆ ಇರುವ ಸಹ ಭಾಳ್ವೆ, ಸಹಾನೂಭೂತಿ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿಧ್ಯಮಾನಗಳ ಹೊರತಾದ ಸೂಷ್ಮಾತಿಗಳನ್ನು ತೋರಿಸುತ್ತಿದೆ ಎಂದೇ ಹೇಳಬಹುದು. ಭಜನ ಮಂದಿರ, ವಿಳ್ಯದೆಲೆ ಮಾರುವ ಕ್ರೈಸ್ತ ಮಹಿಳೆ,ಕ್ಷೌರದ ಅಂಗಡಿ,ದಿನಸಿ ಅಂಗಡಿ,ಸೈಕಲ್ ರಿಪೇರಿ, ಇದ್ದಿಲಿನ ಪೆಟ್ಟಿಗೆಯ ಇಸ್ತ್ರಿ ಅಂಗಡಿ, ಚಪ್ಪಲಿ, ಕೊಡೆ, ಗ್ಯಾಸ್ ಲೈಟ್ ರಿಪೇರಿ ಅಂಗಡಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅವುಗಳಿಗೆ ಸರಿ ಹೊಂದುವ ವ್ಯಕ್ತಿಗಳು ಕೆಲಸ ಮಾಡುವುದರಿಂದ ಸಹಜವಾದ ತುಳು ವಾತಾವರಣ ಇಲ್ಲಿ ನಿರ್ಮಾಣವಾಗಿದೆ.
ಎತ್ತಿನ ಗಾಡಿಗಳು ಈ ಹಳ್ಳಿಯಲ್ಲಿ ಓಡುತ್ತಿವೆ,ಊರಲ್ಲಿ ತಿರುಗಾಡಿ ಬಳೆ ಮಾರುವ ಮಹಿಳೆ,ಖಾಕಿ ವಸ್ತ್ರ ಧರಿಸಿ ತಲೆಗೆ ಟೋಪಿ ಧರಿಸಿ ಅಂಚೆ ತಲುಪಿಸುವ ಅಂಚೆಯಣ್ಣ,ಮನೆ ಮನೆಗೆ ತೆರಳಿ 10-20 ನಿಮಿಷಗಳ ಕಿರು ಯಕ್ಷಗಾನ ಕಾರ್ಯಕ್ರಮ ದಿನ ನಿತ್ಯ ನಡೆಯುತ್ತಿವೆ.ಹೀಗೆ ಈ ಗ್ರಾಮಕ್ಕೆ ಪ್ರವೇಶ ಮಾಡಿದರೆ ಸಂಪೂರ್ಣ ತುಳುನಾಡಿನ ಮಣ್ಣಿನ ಸಂಸ್ಕೃತಿಯಲ್ಲಿ ಹುಟ್ಟಿದ ವಿವಿಧ ಸಂಪ್ರದಾಯವನ್ನು ತೆರೆದಿಡುತ್ತಿದೆ ಮತ್ತು ಆ ಹಿಂದಿನ ತುಳು ನಾಡ ಗತ ವೈಭವವನ್ನು ನೆನಪಿಸುತ್ತಿದೆ.