ಮಂಗಳೂರು,ಡಿ.10:ಮಾಹಿತಿ ಹಕ್ಕು ಕಾಯಿದೆ ಜನಸಾಮಾನ್ಯರಿಗೆ ವರದಾನವಾಗಿ ಪರಿಣಮಿಸಿದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಡಾ.ಕೆ.ಎನ್.ವಿಜಯಪ್ರಕಾಶ್ ಅವರು ತಿಳಿಸಿದರು.
ಅವರು ಮಂಗಳವಾರ ನಗರದ ಕಲಾಂಗಣದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಮಾಹಿತಿ ಹಕ್ಕು ಕಾಯಿದೆ ಕುರಿತ ಮೈಸೂರು ವಿಭಾಗಮಟ್ಟದ ಕಾರ್ಯಾಗಾರದ ಸಮಾರೋಪ ಭಾಷಣ ಮಾಡುತ್ತಿದ್ದರು. ಮಾಹಿತಿ ಹಕ್ಕು ಕಾಯಿದೆಯು ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ತೆರಿಗೆದಾರರ ಹಣವನ್ನು ಪಾರದರ್ಶಕವಾಗಿ ಬಳಸಿದರೆ ಹೊಸ ಸಮಾಜದ ಸೃಷ್ಟಿ ಸಾಧ್ಯ ಎಂದು ನುಡಿದರು. ಅಧಿಕಾರಿಗಳಲ್ಲಿ ಮಾಹಿತಿ ಹಕ್ಕು ಕಾಯಿದೆ ಬಗ್ಗೆ ಭೀತಿ ಮೂಡಿದ್ದು, ಈ ಎರಡು ದಿನಗಳಲ್ಲಿ ತಾವು ಕಲಿತ ವಿಷಯಗಳನ್ನು ದೈನಂದಿನ ಜೀವನದಲ್ಲಿ ಬಳಸುವಂತೆ ಸಲಹೆ ನೀಡಿದರು. ಪ್ರಾಮಾಣಿಕ ಅಧಿಕಾರಿಗಳು ಈ ಕಾಯಿದೆ ಬಗ್ಗೆ ಭೀತರಾಗುವ ಅಗತ್ಯವಿಲ್ಲ ಎಂದು ನುಡಿದರು.ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಾರ್ತಾ ಇಲಾಖೆ ಉಪನಿರ್ದೇಶಕ ಎ.ಆರ್.ಪ್ರಕಾಶ್ ಮಾತನಾಡಿ ಶಿಬಿರಾರ್ಥಿಗಳು ಮಾಹಿತಿ ಹಕ್ಕು ಕಾಯಿದೆಯನ್ನು ಕೇವಲ ಭ್ರಷ್ಟಾಚಾರ ಬಯಲು ಗೊಳಿಸುವ ಉದ್ದೇಶಕ್ಕಲ್ಲದೆ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿಯೂ ಬಳಸಬಹುದು ಎಂದರು. ಮಂಗಳೂರು ವಿ.ವಿ ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಜಿ.ಪಿ.ಶಿವರಾಂ ಮಾತನಾಡಿದರು.ಶಿಬಿರಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಮೈಸೂರು ವಿಭಾಗದ ಎಂಟು ಜಿಲ್ಲೆಗಳ 59 ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಎರಡು ದಿನಗಳ ಈ ಕಾರ್ಯಾಗಾರದಲ್ಲಿ ಬೆಳಗಾವಿಯ ಪ್ರೊ.ಡಿ.ವೈ.ಕುಲಕರ್ಣಿ,ಮಣಿಪಾಲ ವಿಶ್ವವಿದ್ಯಾಲಯದ ಡಾ. ಎ.ನಾರಾಯಣ,ನಿವೃತ್ತ ಕೆ ಎ ಎಸ್ ಅಧಿಕಾರಿ ರಾಜಗೋಪಾಲ ರಾವ್, ಎಸ್ ಡಿ ಎಂ ಕಾನೂನು ಮಹಾವಿದ್ಯಾಲಯದ ಡಾ.ರವೀಂದ್ರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.