ಮಂಗಳೂರು,ಡಿ.16:ದೇಶದ ಮಾನವ ಸಂಪನ್ಮೂಲವನ್ನು ಆರ್ಥಿಕವಾಗಿ ಸದೃಢ ಗೊಳಿಸಲು ವಿಜ್ಞಾನ ಹಾಗೂ ವೈಜ್ಞಾನಿಕ ವ್ಯವಸ್ಥೆ ಸಾಕಷ್ಟು ಕೊಡುಗೆಯನ್ನು ನೀಡಿದೆ.ದೇಶದ ಮೂಲಭೂತ ಅಗತ್ಯಗಳಿಂದ ಹಿಡಿದು ರಕ್ಷಣೆಯವರೆಗೆ ವಿಜ್ಞಾನ ಕ್ಷೇತ್ರದ ಅಭಿವೃದ್ಧಿ ಅಗತ್ಯವಾಗಿದ್ದು, ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಲು ವಿದ್ಯಾರ್ಥಿಗಳಿಗೆ ವಿಜ್ಞಾನದ ಜ್ಞಾನ ಅಗತ್ಯ ಎಂದು ಯೇನಪೋಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಸಯ್ಯದ್ ಅಖೀಲ್ ಅಹಮ್ಮದ್ ಅವರು ಹೇಳಿದರು.
ಇಂದು ಎನ್ಐಟಿಕೆ ಯಲ್ಲಿ ವಿದ್ಯಾರ್ಥಿ-ವಿಜ್ಞಾನ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈಜ್ಞಾನಿಕ ಸಂಶೋಧನೆಗಳಿಂದ ಸಮಸ್ಯೆಗಳಿಗೆ ವೈಚಾರಿಕ ನೆಲೆಯಲ್ಲಿ ಪರಿಹಾರ ಸಿಗಲಿದೆ ಎಂದು ಅವರು ನುಡಿದರು.
ವಿದ್ಯಾರ್ಥಿಗಳು ಅದರಲ್ಲೂ ಮುಖ್ಯವಾಗಿ ಪ್ರೌಢ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿ ವಿಜ್ಞಾನದಿಂದ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮವನ್ನು ಅವರು ಶ್ಲಾಘಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎನ್ ಐ ಟಿಕೆಯ ನಿರ್ದೇಶಕರಾದ ಪ್ರೊ.ಸಂದೀಪ್ ಸಂಚೇತಿ ಅವರು,ವೈಜ್ಞಾನಿಕ ಸಂಶೋಧನೆಗಳಿಗೆ ಆದ್ಯತೆ ನೀಡುವುದರಿಂದ ಮಾತ್ರ ಜಾಗತಿಕವಾಗಿ ದೇಶ ಗುರುತಿಸಿಕೊಳ್ಳಲು ಸಾಧ್ಯ ಎಂದು ನುಡಿದರು. ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಸದ್ಯದಲ್ಲೇ ನ್ಯಾಷನಲ್ ಪ್ರಾಜೆಕ್ಟ್ ಆನ್ ಟೆಕ್ನಾಲಜಿ ಎನ್ಹಾನ್ಸಡ್ ಲರ್ನಿಂಗ್ ಯೋಜನೆಯಡಿ ಸೇರ್ಪಡೆಗೊಳ್ಳಲಿದ್ದು,ಇದರಿಂದ ವಿದ್ಯಾರ್ಥಿಗಳ ಕಲಿಯುವಿಕೆಗೆ ಇನ್ನಷ್ಟು ನೆರವಾಗಲಿದೆ ಎಂದು ನುಡಿದರು. 110 ಕೋರ್ಸ್ ಗಳು ಈ ಕಲಿಯುವಿಕೆ ಯೋಜನೆಯಡಿ ಸೇರ್ಪಡೆಗೊಂಡಿದ್ದು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಇದರಿಂದ ಅಭಿವೃದ್ಧಿ ಹೊಂದಲಿದೆ ಎಂದು ಅವರು ವಿವರಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಸ್ವಾಗತಿಸಿದರು.ಎನ್ಐಟಿಕೆ ಡೀನ್ ಪ್ರೊ.ಶ್ರೀನಿಕೇತನ್, ಕಾರ್ಯಕ್ರಮದ ಸಂಯೋಜಕರು ಡಾ.ಕೆ.ವಿ.ರಾವ್ ವೇದಿಕೆಯಲ್ಲಿದ್ದರು.