ಮಂಗಳೂರು,ಡಿ.18:ಗ್ರಾಮ ಪಂಚಾಯತ್ ಗಳಲ್ಲಿ ನೀರಿನ ಮೀಟರ್ ಅಳವಡಿಕೆ ಪ್ರಗತಿಯ ಬಗ್ಗೆ ಅತೃಪ್ತಿ ವ್ಯಕ್ತ ಪಡಿಸಿದ 3ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ.ಕೊಡ್ಗಿಯವರು,ಎಲ್ಲರಿಗೂ ಸಮಾನ ನ್ಯಾಯವಿರಬೇಕು;ಅರ್ಧದಷ್ಟು ಜನರು ನೀರಿಗೆ ದುಡ್ಡು ನೀಡುವುದು, ಇನ್ನರ್ಧ ಜನರು ಉಚಿತವಾಗಿ ನೀರು ಪಡೆಯುವುದರಿಂದ ಪಂಚಾಯಿತಿಗೆ ನಷ್ಟ ಎಂದು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾ ಯಿತಿಯಲ್ಲಿ ಏರ್ಪ ಡಿಸಿದ್ದ 3ನೇ ರಾಜ್ಯ ಹಣ ಕಾಸು ಆಯೋ ಗದ ವರದಿ ಅನುಷ್ಠಾನ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಯೋಜನೆಗಳ ಅನುಷ್ಠಾನದಲ್ಲಿ ಜನಪ್ರತಿನಿಧಿಗಳಲ್ಲಿ ಹಾಗೂ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯಿರಬೇಕು.ಹಾಗಾದಾಗ ಮಾತ್ರ ಯೋಜನೆಗಳ ಯಶಸ್ವಿ ಅನುಷ್ಠಾನ ಸಾಧ್ಯ ಎಂದ ಅವರು, ಪ್ರಗತಿ ವರದಿಗಳಲ್ಲಿ ತಪ್ಪು ಮಾಹಿತಿಗಳು ಇರಬಾರದು ಎಂಬ ಎಚ್ಚರಿಕೆಯನ್ನೂ ನೀಡಿದರು.
08-09ನೇ ಸಾಲಿನಲ್ಲಿ ಸುಳ್ಯ ತಾಲೂಕಿನಲ್ಲಿ 96 ಲಕ್ಷ ರೂ., ಪುತ್ತೂರಿನಲ್ಲಿ 12.26ಲಕ್ಷ ರೂ., ಬಂಟ್ವಾಳದಲ್ಲಿ 13ಲಕ್ಷ ರೂ., ಬೆಳ್ತಂಗಡಿಯಲ್ಲಿ 12 ಲಕ್ಷ ರೂ., ಮಂಗಳೂರಿನಲ್ಲಿ 1.85 ಲಕ್ಷ ರೂ. ತೆರಿಗೆ ಬಾಕಿ ಇದೆ ಎಂದು ಸಭೆಯಲ್ಲಿ ಅಧಿಕಾರಿಗಳು ಉತ್ತರಿಸಿದರು.
ಜಿ.ಪಂ ಸದಸ್ಯರು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ನಿರ್ವಹಣೆಯ ವ್ಯವಸ್ಥೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಗ್ರಾಮಪಂಚಾಯತ್ ಅಧಿಕಾರವನ್ನು ಕುಂಠಿತಗೊಳಿಸಿದರೆ ವ್ಯವಸ್ಥೆ ದುರ್ಬಲವಾಗುತ್ತದೆ ಎಂಬುದಕ್ಕೆ ಸಹಮತ ವ್ಯಕ್ತಪಡಿಸಿದರು. ನೀರಿನ ಮೀಟರ್ ಅಳವಡಿಕೆ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರು,ಮೀಟರ್ ಅಳವಡಿಕೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಉತ್ತರಿಸಿದರು.
2008-09ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 5054ರಡಿ ಸರಕಾರ ನಿಗದಿಪಡಿಸಿರುವಂತೆ ದ.ಕ. ಜಿ.ಪಂ. 376ಲಕ್ಷ ರೂ.ಗಳ ಕ್ರಿಯಾ ಯೋಜನೆಯನ್ನು ತಯಾರಿಸಿ ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ.ಆದರೆ 188 ಲಕ್ಷ ರೂ.ಮಾತ್ರ ಬಿಡುಗಡೆಯಾಗಿದೆ. ಬಾಕಿ ಅನುದಾನ ಬಿಡುಗಡೆಯಾಗಿಲ್ಲ ಎಂದು ಸಿಇಒ ಗಮನ ಸೆಳೆದರು. ಕುಡಿಯುನ ನೀರಿನ ಯೋಜನೆಯಡಿ 38 ಕೋಟಿ ರೂ. ಅನುದಾನ ಅಗತ್ಯವಿದ್ದು, 09-10ನೇ ಸಾಲಿಗೆ ಕೇವಲ 7.70 ಕೋಟಿ ರೂ. ಅನುದಾನ ನಿಗದಿ ಮಾಡಿದೆ ಎಂದು ಅಧ್ಯಕ್ಷರಿಗೆ ವಿವರಿಸಿದರು.ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.