ಮಂಗಳೂರು,ಡಿ.22:ಬೆಳ್ತಂಗಡಿ ತಾಲೂಕಿನ ಕೊಕ್ಕಡ,ನಿಡ್ಲೆ,ಪಟ್ರಮೆ ಗ್ರಾಮಗಳಲ್ಲಿರುವ ಗೇರು ಅಭಿವೃದ್ಧಿ ನಿಗಮದ ತೋಟಕ್ಕೆ ವೈಮಾನಿಕವಾಗಿ ಎಂಡೋಸಲ್ಫಾನ್ ಸಿಂಪಡಣೆಯಿಂದ ಶೇ.60ಕ್ಕಿಂತ ಮೇಲ್ಪಟ್ಟು ಅಂಗವೈಕಲ್ಯ ಹೊಂದಿರುವ 103 ಮಂದಿಗೆ ಪರಿಹಾರ ನೀಡಲು 25.75ಲಕ್ಷ ರೂ.ಗಳ ಅಗತ್ಯವಿದ್ದು,ಈ ಹಣವನ್ನು ವಿಶೇಷ ಅನುದಾನವೆಂದು ಬಿಡುಗಡೆ ಮಾಡಲು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರು ರಾಜ್ಯ ಸರಕಾರವನ್ನು ಕೋರಿದ್ದಾರೆ.
ಎಂಡೋ ಸಲ್ಫಾನ್ ಮಾದರಿಯ ಎರಿಯಲ್ ಸಿಂಪ ಡಣೆಯಿಂದ ಆಗಿರುವ ತೊಂದರೆಗಳು ಹಾಗೂ ಅಲ್ಲಿನ ನಿವಾಸಿಗಳಿಗೆ ದೀರ್ಘಕಾಲದ ಕಾಯಿಲೆ ಕಾಣಿಸಿಕೊಂಡಿರುವ ಕುರಿತು ಆರೋಗ್ಯ ಕಾರ್ಯಕರ್ತರಿಂದ ಮನೆ ಮನೆ ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಯಡಿ ನರ ಮಂಡಲಕ್ಕೆ ಸಂಬಂಧಿಸಿದ ಕುರುಡುತನ, ಸಂತಾನಹೀನತೆ,ಗರ್ಭಪಾತ,ಕಿವುಡು,ಕ್ಯಾನ್ಸರ್ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ದಾಖಲಾಗಿತ್ತು. 24.09.04ರಲ್ಲಿ ತಜ್ಞ ವೈದ್ಯರಿಂದ 2ಸಲ ಆರೋಗ್ಯ ತಪಾಸಣೆ ಶಿಬಿರ ನಡೆಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದೆ.
ಮತ್ತೆ 27.7.09ರಂದು ನೀಡಿದ ಮುಖ್ಯಮಂತ್ರಿಯವರ ನಿರ್ದೇಶನದಂತೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಜಿಲ್ಲಾ ವೈದ್ಯಾಧಿಕಾರಿಗಳು ಎರಡು ದಿನಗಳ ಕ್ಯಾಂಪ್ ಮಾಡಿ ಶೇ.60ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರಿಗೆ ಕುಟುಂಬಕ್ಕೆ ತಲಾ 25,000ರೂ.ಗಳಂತೆ ಪರಿಹಾರ ನೀಡಲು ಹಾಗೂ ಅಂಗವಿಕಲ ಸರ್ಟಿಫಿಕೆಟ್ ನೀಡಲು ಸೂಚಿಸಿರುತ್ತಾರೆ.ಅದರಂತೆ 75%ರಿಂದ 100%ಅಂಗವಿಕಲತೆ ಇರುವವರು 64 ಜನರು,60%ರಿಂದ 70%ಅಂಗವಿಕಲತೆ ಇರುವವರು 39 ಜನರು,40%ರಿಂದ 50%ಅಂಗವಿಕಲತೆ ಇರುವವರು 6ಜನರು, 35%ಕಡಿಮೆ ಅಂಗವಿಕಲತೆ ಇರುವ 11ಜನರನ್ನು ಹಾಗೂ ಇತರೆ 17ಜನರನ್ನು ಗುರುತಿಸಿದ್ದು ಇವರಿಗೆ ಪರಿಹಾರ ಹಾಗೂ ಸ್ವಯಂ ಉದ್ಯೋಗಕ್ಕೆ ವಿಶೇಷ ಯೋಜನೆ ರೂಪಿಸಲು ಕಾನೂನಿನಲ್ಲಿ ಸಡಿಲಿಕೆ ತಂದು ಸೂಕ್ತ ಆದೇಶ ನೀಡಲು ದ.ಕ.ಜಿಲ್ಲಾಧಿಕಾರಿಗಳು ಸರಕಾರವನ್ನು ಕೋರಿದ್ದಾರೆ.
ಮೂರು ಗ್ರಾಮಗಳಲ್ಲಿ ಒಟ್ಟು 6 ಜನ ಅಂಗವಿಕಲರಿಗೆ ನಿಯಮಾನುಸಾರ ಮಾಸಿಕ ಅಂಗವಿಕಲ ವೇತನ ನೀಡಲಾಗುತ್ತಿದ್ದು, ಉಳಿದವರಿಗೆ ಆದಾಯಮಿತಿ ಜಾಸ್ತಿಯಿರುವುದರಿಂದ ಮಾಸಿಕ ವೇತನ ಮಂಜೂರು ಮಾಡಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.