Wednesday, December 9, 2009
ಪ್ರಜೆಗಳನ್ನು ಪ್ರಭುಗಳಾಗಿಸುವ ಮಾಹಿತಿ ಹಕ್ಕು ಕಾಯ್ದೆ
ಮಂಗಳೂರು,ಡಿ.9:ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಪ್ರಜೆಗಳೂ ನಿಜವಾದ ಅರ್ಥದಲ್ಲಿ ಪ್ರಭುಗಳಾಗಲು ಮಾಹಿತಿ ಹಕ್ಕು ಕಾಯ್ದೆಯಿಂದ ಸಾಧ್ಯ ಎಂದು ರಾಜ್ಯ ಮಾಹಿತಿ ಆಯುಕ್ತ ಡಾ.ಎಚ್.ಎನ್.ಕೃಷ್ಣ ಅಭಿಪ್ರಾಯಪಟ್ಟರು.
ಅವರು ಡಿ.7ರಂದು ನಗರದ ಕಲಾಂಗಣದಲ್ಲಿ ವಾರ್ತಾ ಇಲಾಖೆ ವತಿಯಿಂದ ಏರ್ಪಡಿಸಲಾದ ಮೈಸೂರು ವಿಭಾಗ ಮಟ್ಟದ ಮಾಹಿತಿ ಹಕ್ಕು ಅಧಿನಿಯಮ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದ ಅಕ್ಟೋಬರ್ 12,2005 ರಂದು ಜನರಿಗೆ ನಿಜವಾದ ಸ್ವಾತಂತ್ರ್ಯ ದೊರೆಯಿತು ಎಂದು ಅಭಿಪ್ರಾಯಪಟ್ಟ ಅವರು, ಇದು ಜನಪರ ಕಾಯಿದೆ ಎಂದು ಬಣ್ಣಿಸಿದರು. ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದ ಹಿನ್ನಲೆ,ಕಾಯಿದೆಯ ಮುಖ್ಯಾಂಶಗಳು,ವೈಶಿಷ್ಟ್ಯಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದ ಅವರು, ಈ ಬಗ್ಗೆ ಅಧಿಕಾರಶಾಹಿ ಇನ್ನೂ ಮುಕ್ತವಾಗಿ ತೆರೆದುಕೊಳ್ಳಬೇಕಿದೆ ಎಂದು ಸಲಹೆ ಮಾಡಿದರು.ಕಾಯಿದೆಯ ಕುರಿತು ಹೆಚ್ಚಿನ ಪ್ರಚಾರ ಮಾಡುವುದು ಸರ್ಕಾರದ ಜವಾಬ್ದಾರಿ;ಅದರಲ್ಲೂ ಮಹಿಳೆಯರಲ್ಲಿ,ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವನ್ನು ಅವರು ಪ್ರತಿಪಾದಿಸಿದರು.ಪತ್ರಕರ್ತರು ಮತ್ತು ವಕೀಲರು ಈ ಕಾಯಿದೆಯನ್ನು ಸಮಾಜದ ಹಿತಕ್ಕಾಗಿ ಸದ್ಬಳಕೆ ಮಾಡಿಕೊಳ್ಳಲು ಈ ಸಂದರ್ಭದಲ್ಲಿ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್ ಅವರು ಈ ಕಾಯಿದೆ ಕುರಿತು ಜನರಿಗೆ ಅರಿವು ಮೂಡಿಸಲು ಪ್ರಚಾರಾಂದೋಲನವೇ ನಡೆಯಬೇಕೆಂದು ಸಲಹೆ ನೀಡಿದರು.ಮಾಹಿತಿ ಹಕ್ಕು ಕಾಯಿದೆ ಜನರೇ ಅಧಿಕಾರಿಗಳನ್ನು ನಿಯಂತ್ರಿಸಿ ಕೆಲಸ ಪಡೆದುಕೊಳ್ಳಬಹುದಾದ ಕಾನೂನು. ಇದರ ಬಗ್ಗೆ ಅರಿವು ಮೂಡಿಸಲು ಗ್ರಾಮೀಣ ಪ್ರದೇಶದಲ್ಲಿ ಇಂಥ ಕಾರ್ಯಾಗಾರಗಳನ್ನು ಏರ್ಪಡಿಸುವ ಅಗತ್ಯವಿದೆ ಎಂದರು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜೀವಿಶಾಸ್ತ್ರ,ಪರಿಸರ ಮತ್ತು ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರು ಪ್ರಾಸ್ತಾವಿಕ ಮಾತನಾಡಿದರು.ಮೈಸೂರು ವಿಭಾಗದ ಉಪನಿರ್ದೇಶಕ ಎ.ಆರ್.ಪ್ರಕಾಶ್ ಸ್ವಾಗತಿಸಿದರು.ವಾರ್ತಾಧಿಕಾರಿ ರೋಹಿಣಿ ವಂದಿಸಿದರು.