ಮಂಗಳೂರು,ಡಿ.3:ವಿಕಲಚೇತನರು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಆತ್ಮಸ್ಥೈರ್ಯದಿಂದ ಬದುಕುವ ವಾತಾವರಣ ಸೃಷ್ಟಿಸುವುದು ಪ್ರತಿಯೊಬ್ಬರ ಕರ್ತವ್ಯ.ಅವರ ಅಭಿವೃದ್ಧಿಗಾಗಿರುವ ಇಲಾಖೆಯೊಂದಿಗೆ ಜೊತೆಗೂಡಿ ಜಿಲ್ಲಾಡಳಿತ ಅವರಿಗೋಸ್ಕರ ಮೀಸಲಿಟ್ಟ ಎಲ್ಲ ಸೌಲಭ್ಯಗಳು ಅವರಿಗೆ ತಲುಪಿಸುವಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹೇಳಿದರು.
ಇಂದು ಪುರಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಅಂಗವಿಕಲರ ದಿನಾಚರಣೆ - 2009 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 1981 ವಿಶ್ವ ಅಂಗವಿಕಲರ ವರ್ಷವೆಂದು ಘೋಷಣೆಯಾಗಿದ್ದು, ರಾಜ್ಯದಲ್ಲಿ 1988ರಲ್ಲಿ ಅವರಿಗೋಸ್ಕರ ಪ್ರತ್ಯೇಕ ಇಲಾಖೆ ಸ್ಥಾಪಿಸಲ್ಪಟ್ಟಿತು. ಜಿಲ್ಲೆಯಲ್ಲಿ ಅವರಿಗೆ ಸರ್ಕಾರದಿಂದ ದೊರೆಯಲಿರುವ ಎಲ್ಲ ಸವಲತ್ತುಗಳನ್ನು ನೀಡಲಾಗುವುದು ಎಂದು ಅವರು ನುಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಶಾಸಕ ಯು ಟಿ ಖಾದರ್ ಮಾತನಾಡಿ,ವಿಕಲಚೇತನರಿಗೆ ಈಗಿರುವ ಸೌಲಭ್ಯಗಳು ಪರಿಪೂರ್ಣವಾಗಿಲ್ಲ.ಅವರು ಸ್ವಾವಲಂಬಿಗಳಾಗಿ ಬಾಳಲು ಸಮಗ್ರ ನೀತಿ ನಿಯಮಗಳನ್ನು ರೂಪಿಸಬೇಕಿದೆ ಎಂದರು. ವಿಕಲ ಚೇತನರಿಗಾಗಿ ದುಡಿದ ಶಿಕ್ಷಕಿ ಯರನ್ನು ಹಾಗೂ ಸಾಧಕ ವಿಕಲ ಚೇತನರನ್ನು ಗುರುತಿಸಿ ಸನ್ಮಾನಿ ಸಲಾಯಿತು.ಇವರ ಪರವಾಗಿ ಮಾತನಾಡಿದ ವಿ.ಎಸ್.ರಾಬರ್ಟ್, ಯಾರಿಗೂ ಹೊರೆಯಾಗದಂತೆ ಬಾಳಲು, ವಿಕಲಚೇತನರ ಆತ್ಮಸ್ಥೈರ್ಯ ಹೆಚ್ಚಿಸುವಂತಹ ವಾತಾವರಣದ ಅಗತ್ಯವನ್ನು ಪ್ರತಿಪಾದಿಸಿದರು. ಅಂಗವಿಕಲ ಫೆಡರೇಷನ್ ನ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯ ಕ್ರಮದಲ್ಲಿ ಜಿ.ಪಂ. ಸಿಇಒ ಪಿ.ಶಿವಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್. ರಮೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ಎಸ್ ಡಿ ಎಂ ಉದ್ಯಮ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ದೇವರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಉಪನಿರ್ದೇಶಕರಾದ ಶಕುಂತಲಾ ಸ್ವಾಗತಿಸಿದರು.