ಮಂಗಳೂರು,ಸೆ.25:ಮಹಾ ನಗರಪಾಲಿಕೆಗಳ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಎಲ್ಲಾ ಕಾರ್ಪೊರೇಷನ್ ಮಿತಿಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಡಿ ಎನ್ ಫೋರ್ಸಮೆಂಟ್ ಸೆಲ್ ನ್ನು ಸ್ಥಾಪಿಸಲು ಚಿಂತನೆ ನಡೆದಿದೆ ಎಂದು ರಾಜ್ಯ ನಗರಾಭಿವೃದ್ಧಿ, ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾದ ಎಸ್.ಸುರೇಶ್ ಕುಮಾರ್ ತಿಳಿಸಿದರು.
ಬೃಹತ್ ಬೆಂಗಳೂರು ಮಹಾ ನಗರಪಾಲಿಕೆ ಮಾದರಿಯಲ್ಲಿ ಅಕ್ರಮ ಕಟ್ಟಡ ತಡೆಗೆ ಅದರಲ್ಲೂ ಪ್ರಮುಖವಾಗಿ ಪಾರ್ಕಿಂಗ್ ಪ್ಲೇಸ್ ಗಳ ಸಂರಕ್ಷಣೆಗೆ ಡಿಐಜಿ ಸ್ತರದ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲು ಯೋಜನೆ ರೂಪಿಸಲಾಗಿದೆ ಎಂದು ಸರ್ಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು. ಕಾರ್ಪೊರೇಷನ್ ನಿಯಮಗಳನ್ನು ಅನುಷ್ಙಾನಕ್ಕೆ ತರಲು ಹಿಂದೇಟು ಹಾಕುವುದಾದರೆ ಯೋಜನೆಗಳು ಹಾಗೂ ಅಧಿಕಾರಿಗಳ ಅಗತ್ಯವಿಲ್ಲ ಎಂದು ಅವರು, ಈ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮಗಳಲ್ಲೂ ಬದಲಾವಣೆ ತರುವುದಾಗಿ ನುಡಿದರು. ಬೆಂಗಳೂರಿನ ವಾಹನ ದಟ್ಟಣೆ, ಕಟ್ಟಡ ನಿರ್ಮಾಣ ಮಾದರಿ, ಪಾರ್ಕಿಂಗ್ ವ್ಯವಸ್ಥೆಗಳನ್ನು ಕಣ್ಮುಚ್ಚಿ ಅನುಸರಿಸದೆ ಅಲ್ಲಿನ ವ್ಯವಸ್ಥೆಯ ಬಗ್ಗೆ ಅರಿತು ಲೋಪಗಳ ಬಗ್ಗೆ ತಿಳಿದು ಅಂತಹ ಲೋಪಗಳು ಸಂಭವಿಸದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.
ಮಂಗಳೂರು ನಗರದಲ್ಲಿ ಮುಖ್ಯಮಂತ್ರಿಯ ನೂರು ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನ ಅಡಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್, ಶಾಸಕರಾದ ಯೋಗೀಶ್ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು.