ಮಂಗಳೂರು,ಸೆ.15: ರಾಜ್ಯದ 208 ಕರಾವಳಿ ತೀರದ ಹಳ್ಳಿಗಳಲ್ಲಿ ನ್ಯಾಷನಲ್ ಪಾಪ್ಯುಲೇಷನ್ ರಿಜಿಸ್ಟರ್ ಯೋಜನೆಯಡಿ ಗುರುತು ಚೀಟಿ ನೀಡುವ ಯೋಜನೆಗೆ ಚಾಲನೆ ದೊರೆತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ 11 ಗ್ರಾಮಗಳಲ್ಲಿ ಸೆ.7ರಿಂದ ಜನವರಿ 20ರವರೆಗೆ ಸ್ಥಳೀಯ ನಿವಾಸಿಗಳನ್ನು ಗುರುತಿಸಿ ಗುರುತಿನ ಚೀಟಿ ನೀಡುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಜನಗಣತಿ ನಿರ್ದೇಶನಾಲಯದ ನಿರ್ದೇಶಕರಾದ ಟಿ.ಕೆ. ಅನಿಲ್ ಕುಮಾರ್ ಅವರು ಹೇಳಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಈಗಾಗಲೇ 2003 ಪಾಪ್ಯುಲೇಷನ್ ರೆಜಿಸ್ಟ್ರೇಷನ್ ಕಾಯಿದೆಯನ್ವಯ ಗುಜರಾತ್ ನಲ್ಲಿ ಈಗಾಗಲೇ ಈ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ರಾಜ್ಯದ ಉತ್ತರ ಕನ್ನಡದ 129 ಹಳ್ಳಿಗಳಲ್ಲಿ, ಉಡುಪಿಯ 68 ಹಳ್ಳಿಗಳಲ್ಲಿಯೂ ಈ ಯೋಜನೆಯನ್ನು ಅನುಷ್ಙಾನಕ್ಕೆ ತರಲು ಸಿದ್ಧತೆ ನಡೆಸಲಾಗಿದೆ. ದೇಶದ ಭದ್ರತೆಯ ದೃಷ್ಟಿಯಿಂದ ದೇಶ ನಿವಾಸಿಗಳಿಗೆ ನೀಡುವ ಗುರುತು ಚೀಟಿ ಇದಾಗಿದ್ದು, ಜನರ ಸಂಪೂರ್ಣ ಸಹಕಾರವನ್ನು ಕೋರಲಾಗಿದೆ.
ಮಂಗಳೂರಿನ ಅತಿಕಾರಿ ಬೆಟ್ಟು, ಪಡುಪಣಂಬೂರು, ಪಾವಂಜೆ, ಹಳೆಯಂಗಡಿ, ಮಳವೂರು, ಅರ್ಕುಳ, ಅಂಬ್ಲಮೊಗರು, ಹರೇಕಳ, ಪಾವೂರು, ತಲಪಾಡಿ, ಚಳೈರು ಗ್ರಾಮಗಳಲ್ಲಿ ಗುರುತು ಪತ್ರ ನೀಡಲಾಗುವುದು. ಕಂದಾಯ ಇಲಾಖೆ,ಮೀನುಗಾರಿಕೆ, ಶಿಕ್ಷಣ ಇಲಾಖೆ ಸಕ್ರಿಯವಾಗಿ ಪಾಲ್ಗೊಳ್ಳ ಬೇಕಿದ್ದು,ಜನಗಣತಿ ನಿರ್ದೇಶನಾಲಯ ಮತ್ತು ಬೆಲ್ ಕಂಪೆನಿಯ ಸಹಭಾಗಿತ್ವದಲ್ಲಿ ಮಾಡಲಾಗುವುದು.ವಿವಿಧ ಇಲಾಖೆಗಳ ಪರಸ್ಪರ ಸಹಕಾರದಿಂದ ಕರ್ತವ್ಯ ನಿರ್ವಹಣೆಯ ಅಗತ್ಯವನ್ನು ಪ್ರತಿಪಾದಿಸಿದ ಅವರು, ಮನೆ ಮನೆ ಭೇಟಿ ಸಂದರ್ಭದಲ್ಲಿ ಫೋಟೋಗ್ರಫಿ ಮತ್ತು ಬಯೋಮೆಟ್ರಿಕ್ ಪದ್ಧತಿಯ ಮುಖಾಂತರ ದಾಖಲೆಗಳನ್ನು ಸಂಗ್ರಹಿಸಲಾಗುವುದು. 15ರ ವಯೋಮಾನದವರಿಂದ ದಾಖಲೆಗಳನ್ನು ಸಂಗ್ರಹಿಸಲಾಗುವುದು ಹಾಗೂ 18ರ ಹರೆಯಕ್ಕಿಂತ ಮೇಲ್ಪಟ್ಟವರಿಗೆ ಗುರುತು ಚೀಟಿಗಳನ್ನು ವಿತರಿಸಲಾಗುವುದು ಎಂದರು.
ಮಂಗಳೂರಿನಲ್ಲಿ ಆರಂಭಿಸುವ ಕಾರ್ಯಕ್ರಮಕ್ಕೆ ಪ್ರಥಮ ಹಂತವಾಗಿ ಈ ಸಭೆ ನಡೆಸಿದ್ದು, ಸೆ.7ರಿಂದ 9ರವರೆಗೆ ನಿಗದಿತ ಗ್ರಾಮಗಳ ಮನೆ ಮನೆ ವಿವರಗಳನ್ನು ಕಲೆಹಾಕಿ ಅಂತಿಮ ಪಟ್ಟಿ ತಯಾರಿಸಲಾಗಿದೆ. 11ರಿಂದ 23ರವರೆಗೆ ಎನ್ಯಮರೇಶನ್ ಬ್ಲಾಕ್ ಗಳನ್ನು ಸಿದ್ಧಪಡಿಸುವಿಕೆ ಹಾಗೂ ತಾಲೂಕು ರೆಜಿಸ್ಟ್ರಾರ್ ಗಳ ನೇಮಕಕ್ಕೆ ಸ್ಪಷ್ಟ ರೂಪವನ್ನು ನೀಡುವುದು ಹಾಗೂ ಸೆ.30ರಿಂದ ಅಕ್ಟೋಬರ್ 8ರವರೆಗೆ 90 ಜನರ 20 ಬ್ಯಾಚ್ ಗಳನ್ನು ಮಾಡಲು ಯೋಜನೆ ರೂಪಿಸಲಾಗಿದೆ. 18 ಅಕ್ಟೋಬರ್ ನಿಂದ ಸಂಗ್ರಹಿಸಿದ ಸಂಪೂರ್ಣ ಮಾಹಿತಿಯನ್ನು ಸಿದ್ದಪಡಿಸಲು ಯೋಜನೆ ರೂಪಿಸಲಾಗಿದೆ.ಅಕ್ಟೋಬರ್ 5ರಿಂದ 15ರವರೆಗೆ ಮನೆ ಮನೆ ಭೇಟಿ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಸಸಿಹಿತ್ಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಗಳನ್ನು ಹಂಚಿಕೊಳ್ಳಲಾಯಿತು.
ಜಿಲ್ಲಾಧಿಕಾರಿ ವಿ.ಪೊನ್ನುರಾಜ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಬ್ರಮಣ್ಯೇಶ್ವರ ರಾವ್,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಅಡಿಷನಲ್ ಎಸ್ ಪಿ ರಮೇಶ್ ಉಪಸ್ಥಿತರಿದ್ದರು.