ಮಂಗಳೂರು,ಸೆ.25:ಸಮುದ್ರ ಕೊರೆತ ತಡೆಗೆ ಹಸಿರುಗೋಡೆ ನಿರ್ಮಾಣವೇ ಪರಿಹಾರ; 3ಜಿಲ್ಲೆಗಳಲ್ಲಿ ಈ ಸಂಬಂಧ ಪ್ರತೀ ವರ್ಷ ಅಪಾರ ಹಾನಿ ಸಂಭವಿಸುತ್ತಿದ್ದು, ಕಲ್ಲಿನ ತಡೆಗೋಡೆ ನಿರ್ಮಾಣ ಸಮಸ್ಯೆಗೆ ಪರಿಹಾರವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಸಂಬಂಧ ಬೆಂಗಳೂರಿನ ಅರಣ್ಯ ಭವನದಲ್ಲಿ ಪಶ್ಚಿಮಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ, ಜೀವವೈವಿಧ್ಯ ಮಂಡಳಿ ಸಂಯುಕ್ತವಾಗಿ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಮಾತನಾಡಿದರು.ಸಭೆಯಲ್ಲಿ ಕರಾವಳಿಯ ಜೀವವೈವಿಧ್ಯಕ್ಕಾಗಿರುವ ಹಾನಿಯ ಬಗ್ಗೆ, ಜನಪರ ಯೋಜನೆಗಳಲ್ಲಿ ಸಮಗ್ರ ಜನ ಪಾಲ್ಗೊಳ್ಳುವಿಕೆಯ ಬಗ್ಗೆ ವಿವರವಾದ ಚರ್ಚೆ ನಡೆಸಲಾಯಿತು. ಕಡಲ್ಕೊರೆತ ತಡೆ ಜವಾಬ್ದಾರಿ ಅರಣ್ಯ ಇಲಾಖೆಯದ್ದಾಗಬೇಕು; ಏಷ್ಯನ್ ಡೆವಲಪ್ ಬ್ಯಾಂಕ್ ಬೆಂಬಲದ ಉಳ್ಳಾಲ ಕಡಲ್ಕೊರೆತ ತಡೆ ಮಾದರಿ ಯೋಜನೆಯಲ್ಲಿ ಪರಿಸರ ಅರಣ್ಯ ಕುರಿತು ಆದ್ಯತೆ ನೀಡಬೇಕು, ರಾಜ್ಯ ಪರಿಸರ ಅರಣ್ಯ ಇಲಾಖೆ, ಬಂದರು ಇಲಾಖೆ ಹೆಚ್ಚಿನ ಕಾಳಜಿ ವಹಿಸಿ ಕಾರ್ಯೋನ್ಮುಖರಾಗಬೇಕು. ಸಂಶೋಧಕರು,ಸಂಸ್ಥೆಗಳು ಹಸಿರುಗೋಡೆ ನಿರ್ಮಾಣ ಪ್ರಯೋಗದಲ್ಲಿ ಪಾಲ್ಗೊಳ್ಳುವಂತೆ, ಸಮಗ್ರ ಕ್ರಿಯಾ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಬೇಕು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಕಡಲ್ಕೊರೆತ ತಡೆಗೆ ಕಲ್ಲು ಗೋಡೆ ಮಾಡಿದರೆ ಅದರ ಪಕ್ಕದ ಪ್ರದೇಶ ನಾಶವಾಗುತ್ತದೆ; ಮರಳು ತೆಗೆಯುವ ಕಾರ್ಯದಿಂದ ಅಳಿವೆಗಳು ಕಣ್ಮರೆ ಆಗುತ್ತಿವೆ; ನೈಸರ್ಗಿಕ ಕಾಂಡ್ಲಾ ಇನ್ನಿತರ ಸಸ್ಯವರ್ಗ ನಾಶವಾಗುತ್ತಿದೆ. ಸುರಹೊನ್ನೆ ಮರ, ಪೊಂಗಾಮಿಯಾ, ಗಾಳಿ,ಗೇರು,ಐಪೋಮಿಯಾಬಳ್ಳಿ, ಕಾಂಡ್ಲಾ ಗಿಡಗಳನ್ನು ಸಮುದ್ರದ ಅಂಚಿನಲ್ಲಿ ವ್ಯಾಪಕವಾಗಿ ಬೆಳೆಸುವುದೇ ನಿಜವಾದ ಪರಿಹಾರ ಎಂದು ಕಾರವಾರ ಮೆರೈನ್ ಬಯಾಲಜಿ ಸ್ನಾತಕೋತ್ತರ ಕೇಂದ್ರದ ತಜ್ಞ ಪ್ರೊ. ವಿ.ಎನ್.ನಾಯಕ್ ವ್ಯಾಖ್ಯಾನಿಸಿದರು.
ರಾಜ್ಯ ವನ್ಯಜೀವಿ ವಾರ್ಡನ್ ಬಿ.ಕೆ.ಸಿಂಗ್ ಅವರು, ಜಲಚರ ಪ್ರಾಣಿಗಳ ಬಗ್ಗೆ ಅಧಿಕಾರಿಗಳ ಇರುವ ಮಾಹಿತಿ ಸಾಲದು;ಅರಣ್ಯ ಇಲಾಖಾ ಅಧಿಕಾರಿಗಳಿಗೆ ಇನ್ನಷ್ಟು ಮಾಹಿತಿ ನೀಡುವ ಕೆಲಸವಾಗಬೇಕು ಎಂದರು.
ಪರಿಸರ ಇಲಾಖೆಯ ತಾಂತ್ರಿಕ ನಿರ್ದೇಶಕರಾದ ಪುಟ್ಟಬುದ್ದಿ ಅವರು ಮಾತನಾಡಿ, ಕರಾವಳಿ ನಿಯಂತ್ರಣ ಕಾಯಿದೆ ಮೂಲಕ ಅತಿಕ್ರಮಣ ತಡೆಗೆ ಪ್ರಯತ್ನ ಸಾಗಿದೆ. ದೇಶದ 3 ಮಾದರಿ ಯೋಜನೆಗಳಲ್ಲಿ ಉಳ್ಳಾಲ ಕಡಲ್ಕೊರೆತ ತಡೆ ಯೋಜನೆ ಒಂದು; ಈಗ ಈ ಯೋಜನೆಯ ತಯಾರಿ ನಡೆದಿದೆ ಎಂದು ಮಾಹಿತಿ ನೀಡಿದರು.ಬಂದರು ಇಲಾಖೆ ವಿಶೇಷ ಇಂಜಿನಿಯರ್ ಕೆ.ಎಸ್.ಜಂಬಾಳೆ, ಇದಕ್ಕಾಗಿ ಉಡುಪಿ, ಹೊನ್ನಾವರ,ಕಾರವಾರ ಪ್ರದೇಶದಲ್ಲಿ ಒಟ್ಟು ರೂ.18 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಉಳ್ಳಾಲ ಮಾದರಿ ಯೋಜನೆಗೆ ನ್ಯೂಜಿಲೆಂಡ್ ತಜ್ಞರು ಮಾರ್ಗದರ್ಶನ ನೀಡಲಿದ್ದು,ಈ ಯೋಜನೆಯ ಅಂದಾಜು ವೆಚ್ಚ 601 ಕೋಟಿ ರೂ.ಎಂದು ತಿಳಿಸಿದರು.
ಪ್ರಧಾನ ಅರಣ್ಯ ಸಂರಕ್ಷಣಾ ಅಧಿಕಾರಿ ದೀಪಕ್ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಜೀವವೈವಿಧ್ಯ ಮಂಡಳಿ ಅಧಿಕಾರಿ ಮಂಜುನಾಥ್, ಕಾರವಾರ ಜಿಲ್ಲಾ ಜಲಾನಯನ ಅಧಿಕಾರಿ ಜೆ.ಕೆ.ಹೆಗಡೆ, ಶಿವರಾಜೇಗೌಡ ವಿಷಯ ಮಂಡಿಸಿದರು.