ಮಂಗಳೂರು,ಸೆ.26:ಜನರ ಬಳಿಗೆ ಆಡಳಿತ ಎಂಬ ಘೋಷ ವಾಕ್ಯದಡಿ ಆರಂಭಗೊಂಡ ಜನಸ್ಪಂದನ ಕಾರ್ಯಕ್ರಮ ಇಂದು ಜನರ ಕಷ್ಟಗಳಿಗೆ ಅಧಿಕಾರಿಗಳ ಸ್ಪಂದಿಸುವಿಕೆಯನ್ನು ಖಾತರಿ ಪಡಿಸಲು ಸಹಕಾರಿಯಾಗುತ್ತಿದೆ ಎಂದು ಜೀವಿಶಾಸ್ತ್ರ,ಪರಿಸರ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜೆ.ಕೃಷ್ಣ ಪಾಲೆಮಾರ್ ಅವರು ಹೇಳಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾರ್ಥಮಿಕ ಶಾಲೆ ಕಿಲೆಂಜಾರು, ಕುಪ್ಪೆಪದವಿನಲ್ಲಿ ಮಂಗಳೂರು ತಾಲೂಕು ಗುರುಪುರ ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಫಲ ಲಭ್ಯವಾಗಬೇಕು ಎಂದ ಅವರು, ಇಂದು ನೇರವಾಗಿ ಜನರಿಂದ ಸಮಸ್ಯೆಗಳನ್ನು ಆಲಿಸಿ,ಅರ್ಜಿಗಳನ್ನು ಸ್ವೀಕರಿಸಿ ಪ್ರತಿಯೊಂದು ಅರ್ಜಿಯನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.ತಾವು ನೇರವಾಗಿ ಸ್ವೀಕೃತಿ ನೀಡದೆ ಸ್ವೀಕರಿಸಿದ ಅರ್ಜಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಇಂತಹ ಅರ್ಜಿಗಳ ಪರಿಶೀಲನೆಗೆಂದೇ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ ಹಾಗಾಗಿ ಅರ್ಜಿ ವಿಲೇವಾರಿಯ ಬಗ್ಗೆ ಯಾವುದೇ ಸಂಶಯ ಬೇಡ ಎಂದರು.ಇಂದಿನ ಸಭೆಯಲ್ಲಿ ಮೆಸ್ಕಾಂ, ಅರಣ್ಯ, ಕಂದಾಯ ಹಾಗೂ ಪ್ರಮುಖವಾಗಿ ಬಿಪಿಎಲ್ ಕಾರ್ಡ್ ಗಳ ವಿತರಣೆಯ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಾಯಿತು ಎಂದ ಅವರು,ಮೆಸ್ಕಾಂನ ಅಧಿಕಾರಿಗಳಿಗೆ ಭಾಗ್ಯಜ್ಯೋತಿ ಹಾಗೂ ಕುಟೀರಜ್ಯೋತಿ ಯೋಜನೆಯಡಿ 2ತಿಂಗಳೊಳಗೆ ಸಮಸ್ಯೆ ಪರಿಹರಿಸಲು ಸೂಚನೆ ನೀಡಲಾಗಿದೆ ಎಂದರು.
10 ಲಾರಿಗಳಿಗೆ ದಂಡ:ಇದೇ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಕಸ ಬಿಸಾಡಿ ಪರಿಸರ ಮಾಲಿನ್ಯ ಉಂಟು ಮಾಡುವ ಲಾರಿಗಳ ವಿರುದ್ಧ ಗ್ರಾಮಪಂಚಾಯಿತಿ ಕಾರ್ಯದರ್ಶಿಗಳು ದೂರು ಸ್ವೀಕರಿಸಿ ಪೊಲೀಸರಲ್ಲಿ ದೂರು ದಾಖಲಿಸಬಹುದು. ಈಗಾಗಲೇ ಈ ಸಂಬಂಧ ಪರಿಸರ ಇಲಾಖೆಯಿಂದ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದ್ದು, ಈಗಾಗಲೇ 10 ಲಾರಿಗಳಿಂದ ದಂಡ ವಸೂಲಿ ಮಾಡಿ ಪರಿಸರವನ್ನು ಶುಚಿ ಗೊಳಿಸಲಾಗಿದೆ.ಇದೇ ಲಾರಿಗಳು ಮತ್ತೆ ಇಂತಹ ಕಾಯಕ ಮುಂದುವರಿಸಿದರೆ ಲಾರಿಗಳ ಜಪ್ತಿ ಮತ್ತು ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
26 ಗ್ರಾಮಗಳ ಜನರು ಪಾಲ್ಗೊಂಡಿದ್ದ ಇಂದಿನ ಜನಸಂಪರ್ಕ ಸಭೆಯಲ್ಲಿ 175 ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಸವಲತ್ತು ಹಾಗೂ ಮಾಸಾಶನ, 100 ಜನರಿಗೆ ತೆಂಗಿನ ಸಸಿ, ಇಂದಿರಾ ಆವಾಸ್ ಯೋಜನೆಯಡಿ 9 ಫಲಾನುಭವಿಗಳಿಗೆ ಸವಲತ್ತು,ಆಶ್ರಯ ಯೋಜನೆಯಡಿ 6 ಫಲಾನುಭವಿಗಳಿಗೆ 45,000ರೂ.ನೆರವು ವಿತರಿಸಲಾಯಿತು. ಇಬ್ಬರು ಮಹಿಳೆಯರಿಗೆ ಮಡಿಲು ಕಿಟ್,ಪ್ರಸೂತಿ ಆರೈಕೆ ಯೋಜನೆಯಡಿ ನಾಲ್ವರಿಗೆ ಸಹಾಯಧನವನ್ನೂ ವಿತರಿಸ ಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೃಷ್ಣ ಅಮೀನ್, ವಿನೋದ್ ಮಾಡಾ, ತಾ.ಪಂ.ಸದಸ್ಯರಾದ ಲತಾ ಜಿ.ರೈ, ಪೃಥ್ವಿರಾಜ್ ಆರ್.ಕೆ., ಶಿವಪ್ಪ, ಮುಚ್ಚೂರು ಗ್ರಾ.ಪಂ.ಅಧ್ಯಕ್ಷ ಜನಾರ್ಧನ ಗೌಡ,ಮಾತನಾಡಿದರು. ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ತಹಸೀಲ್ದಾರ್ ರವಿಚಂದ್ರ ನಾಯಕ್, ಉಪತಹಸೀಲ್ದಾರ್ , ಡಾ.ರತ್ನಾಕರ್ ನಾಯಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.