ಮಂಗಳೂರು,ಸೆ.17:ಜಿಲ್ಲೆಯ ಪ್ರಮುಖ ಸಮಸ್ಯೆಗಳಾದ ರಾಷ್ಟ್ರೀಯ ಹೆದ್ದಾರಿ, ನಗರ ನೀರು ಸರಬರಾಜು, ವಿಮಾನ ನಿಲ್ದಾಣ ಪುನರ್ವಸತಿ, ಏಷಿಯನ್ ಫಾರೆಸ್ಟ್ ಶಿಪ್, ಅಕ್ರಮ ಗಣಿಗಾರಿಕೆ, ಮರಳು ಸಾಗಾಣಿಕೆ, ಎಮ್ ಆರ್ ಪಿ ಎಲ್ ತ್ಯಾಜ್ಯ ನಿರ್ವಹಣೆ, ನಗರದಲ್ಲಿ ಬೆಂಕಿ ಅವಘಡಗಳು, ಮೆಸ್ಕಾಂ ಕಾರ್ಯನಿರ್ವಹಣೆಯ ಬಗ್ಗೆ ಇಂದು ನೂತನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಂ.ಎನ್. ವಿದ್ಯಾಶಂಕರ್ ಅವರು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಇಂದು ದಿನಪೂರ್ತಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಮುಖ ಇಲಾಖೆಗಳ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದ ಕಾರ್ಯದರ್ಶಿಗಳು ಶೀಘ್ರದಲ್ಲೇ ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹಾಗೂ ದೆಹಲಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.ಮಧ್ಯಾಹ್ನ ಕಂದಾಯ ಇಲಾಖೆಯನ್ನು ಇನ್ನಷ್ಟು ಉತ್ತಮಪಡಿಸುವ ಬಗ್ಗೆ ಚರ್ಚೆ ನಡೆಸಿದರು.
ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಮಯಮಿತಿ ನಿಗದಿಪಡಿಸಿ ಕಾರ್ಯೋನ್ಮುಖರಾಗುವ ಭರವಸೆಯನ್ನು ನೀಡಿದರು. ರಾಷ್ಟ್ರೀಯ ಹೆದ್ದಾರಿ 13ರಲ್ಲಿ 7 ಕಿ.ಮೀ. ವ್ಯಾಪ್ತಿಗೆ 585 ಲಕ್ಷ ರೂ., 48ರಲ್ಲಿ 12 ಕಿ.ಮೀ.ಗೆ 1,400 ಲಕ್ಷ, 17ರಲ್ಲಿ 5 ಕಿ.ಮೀ. 343 ಲಕ್ಷ ರೂ.ಗಳಿದ್ದು, ಮಳೆಗಾಲದ ನಂತರ ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. ಕುಕ್ಕೆ ಸುಬ್ರಮಣ್ಯ ದೇವಳ ಅಭಿವೃದ್ಧಿಯ ಬಗ್ಗೆಯೂ ಮಾಹಿತಿ ನೀಡಿದರು. ತುಂಬೆಯಲ್ಲಿ ವೆಂಟೆಡ್ ಡ್ಯಾಮ್ ನ ಎತ್ತರ ಹೆಚ್ಚಿಸುವ ಸಂಬಂಧ 35ರಿಂದ 40 ಕೋಟಿ ರೂ.ಗಳ ಅಂದಾಜು ವೆಚ್ಚ ತಯಾರಿಸಲಾಗಿದೆ ಎಂದರು. ಈ ಗವರ್ನೆನ್ಸ್ ಯೋಜನೆಯಡಿ ಬೆಂಗಳೂರು-1 ಮಾದರಿಯಲ್ಲಿ ಮಂಗಳೂರಿನಲ್ಲೂ ನವೆಂಬರ್ ತಿಂಗಳೊಳಗೆ ಆರಂಭಿಸುವುದಾಗಿ ನುಡಿದರು. ಇದಲ್ಲದೆ ಗುಲ್ಬರ್ಗಾ,ಶಿವಮೊಗ್ಗ, ದಾವಣಗೆರೆ, ತುಮಕೂರು,ಮೈಸೂರು, ಬಳ್ಳಾರಿಯಲ್ಲೂ ಇದೇ ಮಾದರಿ ಪಬ್ಲಿಕ್ ಪ್ರವೈಟ್ ಪಾರ್ಟ್ ನರ್ ಶಿಪ್ ನಡಿ ಯೋಜನೆ ರೂಪಿಸಲಾಗುವುದು ಎಂದರು. ಬೆಂಗಳೂರಿನಲ್ಲಿ ಇದು ಯಶಸ್ವಿಯಾಗಿರುವುದಾಗಿಯೂ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಅಪರ ಜಿಲ್ಲಾಧಿಕಾರಿ ಪ್ರಭಾಕರ್ ಶರ್ಮಾ ಅವರು ಉಪಸ್ಥಿತರಿದ್ದರು.