ಮಂಗಳೂರು,ಸೆ.23:ಪ್ರಜಾಪ್ರಭುತ್ವದ ನಾಲ್ಕನೆ ಅಂಗವೆಂದು ಪರಿಗಣಿಸಲ್ಪಟ್ಟಿರುವ ಪತ್ರಿಕೋದ್ಯಮಕ್ಕೆ ಸಂಪೂರ್ಣ ಸ್ವಾತಂತ್ರ್ಯದ ಅಗತ್ಯವನ್ನು ಪ್ರತಿಪಾದಿಸಿದ ರಾಜ್ಯಪಾಲ ಹಂಸರಾಜ ಭಾರಧ್ವಾಜ ಅವರು,ಸತ್ಯವನ್ನು ಜನರಿಗೆ ತಿಳಿಸುವ ಪ್ರಮುಖ ಹೊಣೆ ಪ್ರತ್ರಿಕೋದ್ಯಮ ಮತ್ತು ನ್ಯಾಯಾಂಗದ್ದು ಎಂದರು.
ಇಂದು ಸಂತ ಅಲೋಷಿಯಸ್ ಕಾಲೇಜಿನಲ್ಲಿ ಸಮುದಾಯ ರೇಡಿಯೋ ಸಾರಂಗನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು,ಮಾಧ್ಯಮ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ಮಾತನಾಡಿದರು. ಮಾಧ್ಯಮಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಂತಾಗಲು ಸರ್ಕಾರ ನೆರವಾಗಬೇಕು ಎಂದ ಅವರು ನ್ಯಾಯಾಂಗ ಮತ್ತು ಪತ್ರಿಕೋದ್ಯಮ ನಿಷ್ಪಕ್ಷವಾಗಿ ಕರ್ತವ್ಯ ನಿರ್ವಹಿಸಿದರೆ ಜನರಿಗೆ ಅನುಕೂಲ.ಬಡತನ ಮತ್ತು ನಿರ್ಲಕ್ಷ್ಯವನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದ ಅವರು. ಶಿಕ್ಷಣ ಮತ್ತು ಸಾಮಾಜಿಕ ಶಾಂತಿಯಿಂದ ಅಭಿವೃದ್ಧಿ ಸಾಧ್ಯ ಎಂದ ಅವರು,ಜವಾಬ್ದಾರಿಯುತ ಸ್ಥಾನದಲ್ಲಿರುವವರ ಧ್ಯೇಯ ಜನಸೇವೆಯಾಗಿರಬೇಕು ಎಂದೂ ನುಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಕಾನೂನು ಸಚಿವ ಡಾ.ವೀರಪ್ಪ ಮೊಯಿಲಿ ಅವರು, 21ನೇ ಶತಮಾನದಲ್ಲಿ ಸೈಬರ್ ಅಪರಾಧ ತಡೆಯಲು ಕಾನೂನಿನ ಸವಾಲುಗಳ ಕುರಿತು ಮಾತನಾಡಿ,ಯಾವುದೇ ರೀತಿಯ ಅಪರಾಧ ಮತ್ತು ಅಪರಾಧಿಗಳ ಪತ್ತೆಗೆ ನಮ್ಮ ದೇಶದ ಕಾನೂನು ಶಕ್ತವಾಗಿದೆಯಲ್ಲದೆ, ಸೈಬರ್ ಕ್ರೈಮ್ ತಡೆಗೆ ಎರಡು ತಿಂಗಳೊಳಗೆ ಹೊಸ ಕಾನೂನನ್ನು ರೂಪಿಸುವುದಾಗಿ ಘೋಷಿಸಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಡಾ. ವಿ.ಎಸ್. ಆಚಾರ್ಯ ಅವರು ಕರ್ನಾಟಕ ದರ್ಶನ 2020 ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿಸಿ ಕಾರ್ಯೋನ್ಮುಖವಾಗಿರುವ ಸರ್ಕಾರ ರಾಜ್ಯವನ್ನು ನಂಬರ್ ವನ್ ಆಗಿ ರೂಪಿಸಲು ಕೈಗೊಂಡಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಸಾಮಾಜಿಕ ಸಾಮರಸ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬಡ ಮತ್ತು ಗ್ರಾಮೀಣ ಜನರಿಗೆ ಸರ್ಕಾರದ ಸವಲತ್ತುಗಳು ದೊರೆಯಲು ಈಗಾಗಲೇ ಕೈಗೊಂಡಿರುವ ನೂತನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು,ಸಾಮಾಜಿಕ ಮತ್ತು ಆರ್ಥಿಕ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಎಂದರು. %56ರಷ್ಟು ಕೃಷಿಕರಿರುವ ರಾಜ್ಯದಲ್ಲಿ ಅವರು ಜಿಎಸ್ ಡಿಪಿ ಕೇವಲ 19.3%.ಸರ್ಕಾರಮತ್ತು ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯವನ್ನು ಶೈಕ್ಷಣಿಕವಾಗಿ ನಂಬರ್ ವನ್ ಮಾಡಲು ಆದ್ಯತೆ.ಹೈನುಗಾರಿಕೆಯಲ್ಲಿ ಅವಿಭಜಿತ ಜಿಲ್ಲೆಗಳು ಮುಂಚೂಣಿಯಲ್ಲಿದ್ದು, ಉಡುಪಿಯಲ್ಲೂ ವಿಮಾನ ನಿಲ್ದಾಣ ಸ್ಥಾಪನೆಗೆ ಭೂಸ್ವಾಧೀನ ಕಾರ್ಯ ಆರಂಭಿಸಲಾಗಿದೆ. ಮಂಗಳೂರು-ಮುಂಬೈಗೆ ಹಗಲು ರೈಲು ಓಡಿಸುವ ಬಗ್ಗೆ,ಬೆಂಗಳೂರು-ಮಂಗಳೂರು ಹಗಲು ರೈಲಿನ ಬಗ್ಗೆ ಕೇಂದ್ರ ಕಾನೂನು ಸಚಿವರ ಸಹಕಾರವನ್ನು ಕೋರಿದ ಅವರು,ದ.ಕ ಮತ್ತು ಉಡುಪಿಯಲ್ಲಿ 170 ಕಿ.ಮೀ ವ್ಯಾಪ್ತಿಯ ಸಮುದ್ರತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಮೀನುಗಾರಿಕೆ ಹಾಗೂ ವಾಣಿಜ್ಯ ಉದ್ದೇಶದ ಬಂದರುಗಳ ನಿರ್ಮಾಣದ ಬಗ್ಗೆ ಚಿಂತಿಸಲಾಗಿದೆ ಎಂದರು.
ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯು.ಟಿ.ಖಾದರ್ ಉಪಸ್ಥಿತರಿದ್ದರು. ಮಂಗಳೂರಿನ ಬಿಷಪ್ ಡಾ.ಅಲೋಷಿಯಸ್ ಪಿ.ಡಿ ಸೋಜಾ ಆಶೀರ್ವವಚನ ನೀಡಿದರು. ಫಾ.ಜೋಸೆಫ್ ರಾಡ್ರಿಗಸ್ ಸ್ವಾಗತಿಸಿದರು.