ಸರ್ಕಾರದ ಪರವಾಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೃಹ ಸಚಿವ ಶ್ರೀ ವಿ. ಎಸ್. ಆಚಾರ್ಯ ಅವರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ತುಳು ಸಮ್ಮೇಳನದ ಯಶಸ್ಸಿಗೆ ಪೂರಕ ನೆರವನ್ನು ಸರ್ಕಾರದಿಂದ ನೀಡುವ ಭರವಸೆ ನೀಡಿದರಲ್ಲದೆ, ಒಂದು ಕೋಟಿ ರೂ.ಗಳ ನೆರವನ್ನು ಘೋಷಿಸಿದರು. ತುಳು ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿ ಗುರುತಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ಸಭೆಗೆ ತಿಳಿಸಿದರಲ್ಲದೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ತುಳು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಕಾರ್ಯಕ್ರಮಕ್ಕೆ ಪೂರಕವಾಗಿ ರಸ್ತೆಗಳ ದುರಸ್ತಿಗೂ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ ಪಾಲೇಮಾರ್ ಅವರು, ತುಳು ಕಲಿಕೆಗೆ ಹಾಗೂ ಅಭಿವೃದ್ಧಿಗೆ ಸರ್ಕಾರ ಎಲ್ಲಾ ಅಗತ್ಯ ಸಹಕಾರ ನೀಡುವ ಭರವಸೆಯನ್ನು ನೀಡಿದರಲ್ಲದೇ ಇದೊಂದು ಅರ್ಥಪೂರ್ಣ ಮತ್ತು ಮಾದರಿ ಸಮ್ಮೇಳನ ಆಗಬೇಕೆಂಬ ಆಶಯ ವ್ಯಕ್ತಪಡಿಸಿದರು. ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ಸಮ್ಮೆಳನದ ರೂಪು ರೇಷೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ನಿನ್ನೆ-ಇಂದು-ನಾಳೆ ಎಂಬ ಪರಿಕಲ್ಪನೆಯಡಿ ನಡೆಯಲಿರುವ ಮುಖ್ಯ ಕಾರ್ಯಕ್ರಮಕ್ಕೆ ಪೂರಕವಾಗಿ ಸೆ.19,20ರಂದು ಕಾರ್ಕಳದಲ್ಲಿ ಸಾಹಿತ್ಯಗೋಷ್ಠಿ, ಅ.10ರಂದು ಬಂಟ್ವಾಳದಲ್ಲಿ ಎದುರುಕತೆ, ಗಾದೆ, ಕುಲಕಸುಬುಗಳು, 31ರಂದು ವಾಣಿಜ್ಯ, ವ್ಯವಹಾರ, ನೇತ್ರಾವತಿ ನದಿ ತಿರುವು ಯೋಜನೆ ಕುರಿತು ಚರ್ಚಾಗೋಷ್ಠಿ, ನ.7ರಂದು ಮೂಡಬಿದ್ರೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, 21ರಂದು ಆಭರಣ, ವೇಷಭೂಷಣ,ಜಾನಪದ ಔಷಧಿಗಳು, 28ರಂದು ಪುತ್ತೂರು,ಸುಳ್ಯದಲ್ಲಿ ಜಾನಪದ ಆಟೋಟ, 29ರಂದು ಕಾಸರಗೋಡಿನಲ್ಲಿ ತುಳುನಾಡಿನ ನಲಿಕೆಲು ನವರಸದಾಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಸಭೆಗೆ ವಿವರಿಸಿದರು.ಸಭೆಯಲ್ಲಿ ತುಳು ಅಕಾಡೆಮಿ ಅಧ್ಯಕ್ಷ ಶ್ರೀ ಪಾಲ್ತಾಡಿ ರಾಮಕೃಷ್ಣ ಆಚಾರ್, ಸಂಸದ ಶ್ರೀ ನಳಿನ್ ಕುಮಾರ್,ಶಾಸಕರಾದ ಶ್ರೀ ಬಿ. ರಾಮನಾಥ ರೈ, ಶ್ರೀ ಯು.ಟಿ. ಖಾದರ್, ಶ್ರೀ ಅಭಯಚಂದ್ರ ಜೈನ್, ಕರಾವಳಿ ಪ್ರಾದಿಕಾರದ ಅಧ್ಯಕ್ಷ ಶ್ರೀ .ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಭಂಡಾರಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಶ್ರೀ ಕುಂಬ್ಳೆ ಸುಂದರ ರಾವ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಅಪರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ್ ಶರ್ಮಾ, ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶೀ ಡಾ. ಮೋಹನ್ ಆಳ್ವ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು, ಪಾಲ್ಗೊಂಡಿದ್ದರು.