ಮಂಗಳೂರು,ಸೆ.29: ಕೃಷಿ ಉತ್ತಮ,ವ್ಯಾಪಾರ ಮಧ್ಯಮ,ನೌಕರಿ ಕನಿಷ್ಠ ಇದು ಸ್ವಾಭಿಮಾನಿ ಸಾವಯವ ಕೃಷಿಕ ಎಡ್ವರ್ಡ್ ರೆಬೆಲ್ಲೋ ಅವರ ನೇರ ನುಡಿ.ಎರಡು ಎಕರೆ ಕಾಡು,ಗುಡ್ಡ ಪ್ರದೇಶದ ಭೂಮಿಯಲ್ಲಿ ಏನೆಲ್ಲಾ ಬೆಳೆಯಲು ಸಾಧ್ಯ ಎಂದು ಪ್ರಶ್ನಿಸಿದರೆ ಏನು ಸಾಧ್ಯವಿಲ್ಲ ಎಂಬ ಉತ್ತರ ಇವರದ್ದು. ಸುದ್ದಿ ಮಾದ್ಯಮಾ, ಕೃಷಿ ಪತ್ರಿಕೆಗಳಿಂದ ದೊರೆಯುವ ಮಾಹಿತಿಯ ಜಾಡು ಹಿಡಿದು ಎಲ್ಲೆಡೆಯಿಂದ ಅಪರೂಪದ,ಹೆಚ್ಚಿನ ಲಾಭವನ್ನು ತಂದು ಕೊಡುವ ಗಿಡಗಳನ್ನು ಸಂಗ್ರಹಿಸಿ ತಂದು,ತಮ್ಮ ತೋಟದಲ್ಲಿ ಬೆಳೆದು ಮಾರುಕಟ್ಟೆಯ ಬೇಡಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಾವಯವ ಕೃಷಿಯನ್ನು ಲಾಭದಾಯಕ ಕೃಷಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.
ಕೇವಲ ರಂಬುಟಾನ್ ಹಣ್ಣಿನಿಂದ ವಾರ್ಷಿಕ ಕ್ವಿಂಟಾಲ್ ಹಣ್ಣು ಮತ್ತು 7 ರಿಂದ 8000 ರೂ.ಗಳನ್ನು ಸಂಪಾದಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.ಕಾಲು ಹಾದಿಯಲ್ಲಿರುವ ಗುಡ್ಡದ ನಡುವೆ ಇರುವ ಇವರ ಕೃಷಿ ಭೂಮಿಯನ್ನು ಕಾಲು ಹಾದಿಯಲ್ಲೇ ತಲುಪಬೇಕು; ಮನೆಯಿಂದ 3/4 ಕಿ.ಮೀನಷ್ಟು ದೂರವಿರುವ ತೋಟಕ್ಕೆ ತಲೆಯ ಮೇಲೆ ಸಾವಯವ ಗೊಬ್ಬರವನ್ನು ಹೊತ್ತುಕೊಂಡು ತರಬೇಕು. ಏಪ್ರಿಲ್ ನಿಂದ ಜೂನ್ ವರೆಗೆ ಇವರ ಸಾವಯವ ತೋಟಕ್ಕೆ ನೀರು ಇರುವುದಿಲ್ಲ.ಇವರ ಭೂಮಿಯ ಸುತ್ತ ಬೋರ್ ವೆಲ್ ಗಳಿರುವುದರಿಂದ ಬೇಸಿಗೆ ದಿನಗಳಲ್ಲಿ ಇವರ ತೋಟದಲ್ಲಿರುವ ನೀರಿನ ಮೂಲ ಬತ್ತುತ್ತದೆ. ಆದರೂ ಇವರ ತೋಟ ಮಾತ್ರ ಹಸಿರಿನಿಂದ ಕಂಗೊಳಿಸುತ್ತದೆ; ರಾಸಾಯಿನಿಕ ಗೊಬ್ಬರ ಬಳಕೆಯಿಂದ ಭೂಮಿ ಹಾಳು;ಅಲ್ಲದೆ ಹೆಚ್ಚಿನ ಖರ್ಚು,ಇವರು ತಮ್ಮ ತೋಟಕ್ಕೆ ಜೀವಾಮೃತವನ್ನು ಸಹ ಬಳಸುವುದಿಲ್ಲ ಬರೇ ಹಟ್ಟಿ ಗೊಬ್ಬರ. ಇದಕ್ಕಾಗಿ ಅವರು ಕೇವಲ ಎರಡು ಹಸುಗಳನ್ನು ಸಾಕುತ್ತಾರೆ. ಜಾನುವಾರುಗಳನ್ನು ಸಾಕುವುದು ಕೃಷಿ ಕೆಲಸಕ್ಕಿಂತ ಹೆಚ್ಚಿನ ಪರಿಶ್ರಮವನ್ನು ಬೇಡುತ್ತದೆ, ಹಾಗಾಗಿ ಕೇವಲ ಎರಡು ಹಸುಗಳನ್ನು ಸಾಕಿ ಇದರ ಗಂಜಲದಿಂದಲೇ ತಮ್ಮ ತೋಟವನ್ನು ಕಾಪಾಡಿಕೊಂಡಿದ್ದಾರೆ.ಸುಮಾರು 18 ಲೀಟರ್ ನಷ್ಟು ಹಾಲನ್ನು ಮಾರುತ್ತಾರೆ.
ಎರಡು ಎಕರೆ ಗುಡ್ಡದಲ್ಲಿ ಕೇವಲ ಒಂದು ಎಕರೆ ಭೂಮಿಯಲ್ಲಿ ಮಾತ್ರ ಕೃಷಿ ಮಾಡಿರುವ ಈ ತೋಟದಲ್ಲಿ ಕಾಲಿಡುವಾಗ ಎಚ್ಚರದಿಂದ ನಡೆಯಬೇಕಾಗುತ್ತದೆ. ಎಲ್ಲಿ ನೋಡಿದರೂ ಗಿಡ,ಮರಗಳು,ಹೂವುಗಳು.ಕೀಟಗಳಿಂದ ಹಣ್ಣನ್ನು ಸಂರಕ್ಷಿಸಲು ಹೂವುಗಳನ್ನು ಬೆಳೆಸಿರುವ ಇವರು, ಮಂಗಗಳ ಹಾವಳಿ ತಡೆಯ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ.ತೆಂಗು,ಅಡಿಕೆ, ರಂಬುಟಾನ್, ಮಲಯನ್ ಆಪಲ್,ಡುರಿಯಾನ್ ಹಣ್ಣು, ಮಲೇಷಿಯನ್ ವೆನಿಲಾ, ಮುಸುಂಬಿ, ವಿವಿಧ ಜಾತಿಯ ಹಲಸು ಗಿಡಗಳನ್ನು ರಾಜ್ಯದೆಲ್ಲೆಡೆಯಿಂದ ಸಂಗ್ರಹಿಸಿ ತಂದಿದ್ದಾರೆ. ಕಿತ್ತಳೆ,ಪೇರಳೆ,ಬೀಜ ರಹಿತ ನೀಲಿ, ಬಿಳಿ ನೇರಳೆ, ಚಿಕ್ಕು,ಅಂಜೂರಾ, ಬಾಳೆ,ಡ್ರ್ಯಾಗನ್ ಫ್ರೂಟ್,ಕಾಂಬೋಡಿಯಾ ಮಸ್ಕ್ ಫ್ರೂಟ್,ಥಾಯ್ಲ್ಯಾಂಡ್ ನ ಸ್ನೇಕ್ ಫ್ರೂಟ್ ಸೇರಿದಂತೆ ಹಲವಾರು ಜಾತಿಯ ಹಣ್ಣುಗಳು ಜೊತೆಯಲ್ಲಿ ಕರಿ ಮೆಣಸು,ಏಲಕ್ಕಿ,ಕೋಕ್ಕೋ,ಕಾಫಿ,ನೆಲ್ಲಿಕಾಯಿ,ಹುಣಸೇಗಿಡ,ದೀವಿ ಹಲಸಿನ ಗಿಡ,ನೀರು ಹಲಸು, ಹೆಬ್ಬಲಸು,ಸಿಹಿ ಬಿದಿರು ಗಿಡಗಳನ್ನು ಬೆಳೆಯಲಾಗಿದೆ. ಹಲಸಿನಲ್ಲಿ ಬೆಳಗಾವಿಯಿಂದ ಖಾನಾಪುರ ವೆರೈಟಿ,ಧಾರವಾಡದ ಕಿತ್ತೂರು ರಾಣಿ, ಸಾಗರದ ಚಂದ್ರಬಕ್ಕೆ,ದೊಡ್ಡಬಳ್ಳಾಪುರದ ಹಲಸು, ಲಾಲ್ ಬಾಗ್ ನಿಂದ ತಂದ ಮಧುರಾ,ಜಯಚಂದ್ರ ಹಲಸಿನ ಗಿಡಗಳನ್ನು ಈಗ ಬೆಳೆಸುತ್ತಿದ್ದಾರೆ. ದೀವಿ ಹಲಸಿನ ಮರ ಟೊಳ್ಳಾಗಿರುವುದರಿಂದ ಇದನ್ನು ಹೆಬ್ಬಲಸಿನಿಂದ ಕಸಿ ಮಾಡಲಾಗಿದೆ. ಕರಿಮೆಣಸಿನ ಗಿಡವನ್ನು ಮರಹಿಪ್ಪಲಿಯೊಂದಿಗೆ ಕಸಿ ಮಾಡಿ ಪೊದೆಗಳಂತೆ ಬೆಳೆಸಲಾಗುತ್ತಿದೆ. ಪೇರಳೆ ಗಿಡದಲ್ಲಿ ಬಿಡುವ ಹಣ್ಣು ಒಂದು ಕೆ.ಜ ತೂಕವಿದೆ.! ಇವರ ತೋಟದಲ್ಲಾಗುವ ಪರಿಮಳಭರಿತ ಲಿಂಬೆ ಹಣ್ಣಿಗೆ ಶಾಶ್ವತ ಗ್ರಾಹಕರಿದ್ದಾರೆ.
ತೋಟದ ಎಲ್ಲಾ ಕೆಲಸವನ್ನು ಪ್ರೀತಿ ಹಾಗೂ ಶ್ರದ್ಧೆಯಿಂದ ಒಬ್ಬರೇ ನಿರ್ವಹಿಸುವ ಇವರು,ಹೊಸ ಗಿಡಗಳನ್ನು ಕೊಂಡು ತರುವುದು ಮಾತ್ರವಲ್ಲದೆ, ತಮ್ಮದೇ ತೋಟದಲ್ಲಿ ಕಸಿ ಕಟ್ಟುವಂತಹ ಹಲವು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಹೊಸ ಗಿಡಗಳನ್ನು ಮಾರಾಟ ಮಾಡುತ್ತಾರೆ; ಕೃಷಿಗೆ ಹೆಚ್ಚಿನ ಬಂಡವಾಳವಿಲ್ಲ,ಸ್ಲರಿಯಲ್ಲದೆ ಗಿಡದ ಬುಡದಲ್ಲೇ ಲಭ್ಯವಿರುವ ಸೊಪ್ಪು,ಕಸಕಡ್ಡಿ ಜೊತೆ ಗೋಬರ್ ಗ್ಯಾಸ್ ವೇಸ್ಟ್, ತರಕಾರಿ ವೇಸ್ಟ್ ಬಳಸುತ್ತಾರೆ.ಬ್ಯಾಂಕ್ ನಿಂದ ಸಾಲವಾಗಲೀ, ಸರ್ಕಾರದಿಂದ ಸಹಾಯವಾಗಲಿ ಪಡೆಯದ ಇವರಿಗೆ ತಮ್ಮ ತೋಟದಿಂದ ಬರುವ ವಾರ್ಷಿಕ ಆದಾಯ 20 ಸಾವಿರ ರೂ., ಇವರಿಗೆ ಖರ್ಚಾಗುವುದು ಗಿಡಗಳನ್ನು ತರಲು ಹಾಗೂ ಊರಿಂದೂರಿಗೆ ಪ್ರಯಾಣಿಸಲು. ಎಲ್ಲೆಡೆಯೂ ಕೃಷಿಯ ಬಗ್ಗೆ ನಿರುತ್ಸಾಹ,ಐಟಿ ಬಿಟಿ,ಸರ್ಕಾರಿ ನೌಕರಿಯ ಬಗ್ಗೆ ಚಿಂತಿಸುವ ಪ್ರಸಕ್ತ ಸಮಯದಲ್ಲಿ ಸಾವಿಲ್ಲದ ಸಾವಯವ ಕೃಷಿಯ ಬಗ್ಗೆ,ಭೂಮಿಯ ಫಲವತ್ತತೆಯನ್ನು ನಾಶಪಡಿಸದೆ ಸದ್ಬಳಕೆ ಮಾಡುವ ಬಗ್ಗೆ ಎಲ್ಲರಿಗೂ ಸ್ಪೂರ್ತಿಯಾಗಿ ನಿಲ್ಲುತ್ತಾರೆ ಇಂತಹ ಸ್ವಾವಲಂಬಿ ಕೃಷಿಕರು.
ಸಮಯಪ್ರಜ್ಞೆ ಮತ್ತು ಮಾಹಿತಿಯಿಂದ ಒಂದೇ ಬೆಳೆಗೆ ಅವಲಂಬಿತರಾಗದೆ,ಕೃಷಿಯಲ್ಲಿ ಸ್ವಾವಲಂಬಿ ಬದುಕನ್ನು ಕಟ್ಟಿರುವ ಇವರು, ಊರ ತರಕಾರಿಗಳಿಗೆ ಬೇಡಿಕೆಯಿರುವ ಸಂದರ್ಭದಲ್ಲಿ ತರಕಾರಿ ಬೆಳೆದು 8 ರಿಂದ 10,000 ರೂ. ಗಳಿಸುತ್ತಾರೆ. ಆಸಕ್ತ ಕೃಷಿಕರಿಗೆ ಮಾತ್ರ ಎಲ್ಲಾ ಮಾಹಿತಿಯನ್ನು ನೀಡಲು ಸಿದ್ಧರಿರುವ ಇವರ ವಿಳಾಸ ಎಡ್ವರ್ಡ್ ರೆಬೆಲ್ಲೋ, ತಾರಿಪಡ್ಪು ನಿವಾಸ, ತಾಕೊಡೆ ಮೂಡಬಿದ್ರೆ- ಮೊಬೈಲ್:9449471542.