Tuesday, September 1, 2009

ಅತಿವೃಷ್ಠಿ:ದಕ್ಷಿಣ ಕನ್ನಡಕ್ಕೆ ಕೇಂದ್ರ ತಂಡ


ಮಂಗಳೂರು, ಸೆ.1: ಮಳೆಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಒಟ್ಟು 5103.26 ಲಕ್ಷ ನಷ್ಟ ಸಂಭವಿಸಿದ್ದು, ಭತ್ತ, ಅಡಿಕೆ, ತೆಂಗು, ರಸ್ತೆ, ಸೇತುವೆ ಇತ್ಯಾದಿ ಒಟ್ಟು ನಷ್ಟ 3,902.98 ಲಕ್ಷ ರೂ., ಮನೆ, ತೋಟ ಇತ್ಯಾದಿ ಹಾನಿ 1,200.28 ಲಕ್ಷ ಹಾನಿ, ಜೀವಹಾನಿ 15, ಗಾಯ 8, ಮನೆ ಹಾನಿ 25, ಭಾಗಶ: ಮನೆ ಹಾನಿ 694 ನಷ್ಟವಾಗಿದೆ.
ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರದ ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರು ಜಿಲ್ಲೆಯ ನಷ್ಟದ ಬಗ್ಗೆ ಸಮಗ್ರ ವಿವರ ನೀಡಿದರು. ಧರ್ಮಸ್ಥಳದ ಸನ್ನಿಧಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯ ನಾಶ ನಷ್ಟದ ವಿವರ ಸಂಗ್ರಹಿಸಿದ ತಂಡ, ನಂತರ ಧರ್ಮಸ್ಥಳದಿಂದ ಶಿಬಾಜೆ, ಶಿಶಿಲ, ಉಪ್ಪಿನಂಗಡಿ, ಗುರುವಾಯನಕೆರೆ, ಬೆಳ್ಗಂಗಡಿಗೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದರು. ಕೇಂದ್ರೀಯ ತಂಡದಲ್ಲಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಬಿ. ಬಾಮತಿ,ನವದೆಹಲಿಯ ಗ್ರಾಮೀಣಾಭಿವೃದ್ಧಿ ಮಂಡಳಿಯ ಜಂಟಿ ನಿರ್ದೇಶಕ ಪಿ. ಮನೋಜ್ ಕುಮಾರ್, ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಸಿ.ಆರ್. ಗಂಗಾಧರ್, ಸಿಇಓ ಶಿವ ಶಂಕರ್, ಸಂಶೋಧನಾ ಅಧಿಕಾರಿ ಆರ್. ಕೆ. ಶರ್ಮಾ, ಪಶುಸಂಗೋಪನೆಯ ಉಪನಿರ್ದೇಶಕ ಶಶಿಧರ್, ಪುತ್ತೂರು ಎ ಸಿ. ಡಾ. ಹರೀಶ್ ಕುಮಾರ್, ತಹಸೀಲ್ದಾರ್ ಕೆ. ಟಿ.ಕಾವೇರಿಯಪ್ಪ, ಬೆಳ್ತಂಗಡಿ ತಹಸೀಲ್ದಾರ್ ಎನ್. ಎಸ್. ಚಿದಾನಂದ ಮತ್ತಿತರ ಅಧಿಕಾರಿಗಳು ಸಮೀಕ್ಷಾ ತಂಡದಲ್ಲಿದ್ದರು.