ಮಂಗಳೂರು, ಮೇ.14:ಮಂಗಳೂರು ನಗರದಲ್ಲಿ ಮಾರಕ ರೋಗ ಮಲೇರಿಯವನ್ನು ತಡೆಯಲು ಮಹಾನಗರಪಾಲಿಕೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಮಲೇರಿಯಾ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪಾಲಿಕೆ ಆಯುಕ್ತ ಶ್ರೀ ಸಮೀರ್ ಶುಕ್ಲಾ ಅವರು ತಿಳಿಸಿದ್ದಾರೆ.
ನಗರದಲ್ಲಿ ಮಲೇರಿಯಾ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ರೋಗ ತಡೆಗೆ 20 ತಂಡಗಳು ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು,ಸೊಳ್ಳೆಗಳಿಂದ ಹರಡುವ ಈ ಕಾಯಿಲೆಯನ್ನು ತಡೆಯುವಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅಗತ್ಯ ಎಂದಿರುವ ಅವರು, ಪಾಲಿಕೆಯ ಅಧಿಕಾರಿಗಳು ಮನೆ ಮನೆಗೆ ಬರುವಾಗ ನಿಮ್ಮ ಮನೆಯ ಬಾವಿ ಮತ್ತು ಓವರ್ ಹೆಡ್ ಟ್ಯಾಂಕ್ ಗಳ ಬಗ್ಗೆ ವಹಿಸಬೇಕಾದ ಬಗ್ಗೆ ನೀಡುವ ಮುನ್ನೆಚ್ದರಿಕೆಯನ್ನು ಚಾಚೂ ತಪ್ಪದೆ ಪಾಲಿಸಿ ಎಂದು ಸಲಹೆ ಮಾಡಿದ್ದಾರೆ. ಬಾವಿ ಹೊಂದಿರುವ ಮನೆಗಳವರು ಬಾವಿಯೊಳಕ್ಕೆ ಕಡ್ಡಾಯವಾಗಿ ಗಪ್ಪಿ ಮೀನನ್ನು ಹಾಕಬೇಕು. ಈ ಮೀನುಗಳು ಮನಾಪದ ಮಲೇರಿಯಾ ನಿಯಂತ್ರಣ ಘಟಕದಲ್ಲಿ ಬೆ. 9ರಿಂದ 1 ಗಂಟೆಯವರೆಗೆ ಉಚಿತವಾಗಿ ಲಭ್ಯವಿರುತ್ತದೆ. ನಾವು ಸ್ವಚ್ಛ ಮತ್ತು ಶುದ್ಧವೆಂದು ತೀರ್ಮಾನಿಸುವ ಬಾವಿಗಳು ಸೊಳ್ಳೆಯ ಉತ್ಪತ್ತಿಗೆ ಕಾರಣವಾಗಿದ್ದು, ನಮ್ಮ ಪರಿಸರದ ಬಗ್ಗೆ ಅರಿವು ಬೆಳೆಸಿಕೊಳ್ಳುವುದರಿಂದ ಮಲೇರಿಯಾ ತಡೆ ಸಾಧ್ಯ ಎಂದಿದ್ದಾರೆ.ಬಾಟಲು, ಡಬ್ಬಗಳು, ಟೈರ್ ಗಳು,ತೆಂಗಿನ ಚಿಪ್ಪುಗಳು, ಹೂಕುಂಡಗಳು,ಕೃತಕ ನೀರಿನ ಸಂಗ್ರಹಗಳಿದ್ದರೆ ನಿರ್ಮೂಲನೆ ಮಾಡಲು ಸಲಹೆ ಮಾಡಿದ್ದಾರೆ.
ಮಲೇರಿಯಾದ ಪತ್ತೆ ಮತ್ತು ಚಿಕಿತ್ಸೆಯಲ್ಲಿ ವಿಳಂಬವಾದರೆ ಸಾವು ಸಂಭವಿಸುವ ಸಾಧ್ಯತೆ ಇರುವುದರಿಂದ ಜ್ವರ, ತಲೆನೋವು, ಮೈಕೈನೋವು ಕಾಮಾಲೆ ತೊಂದರೆಗಳಿದ್ದಲ್ಲಿ ಉಚಿತ ರಕ್ತ ತಪಾಸಣೆ ಮತ್ತು ಚಿಕಿತ್ಸೆಗೆ ಹಾಗೂ ಔಷಧಿಗೆ ನಗರದ ಜೆಪ್ಪು, ಬಂದರು, ಬಿಜೈ, ಲೇಡಿಹಿಲ್ ಹಾಗೂ ಮನಾಪ ಕಚೇರಿಯಲ್ಲಿ ಮಲೇರಿಯಾ ಕ್ಲಿನಿಕ್ ಗಳಿದ್ದು,ಬೆ.9ರಿಂದ 12ರವರೆಗೆ ಮತ್ತು ಮ. 3ರಿಂದ 5ರವರೆಗೆ ಸಾರ್ವಜನಿಕರು ಚಿಕಿತ್ಸಾಲಯಗಳನ್ನು ಸಂಪರ್ಕಿಸಬಹುದು.
ಮಲೇರಿಯಾ ತಡೆ ಸಂಬಂಧ ಸಲಹೆ ಹಾಗೂ ಮಾರ್ಗದರ್ಶನಕ್ಕೆ ಪಾಲಿಕೆ ಕಚೇರಿ 2220314, 2220311, ಪಾಲಿಕೆಯ ಮಲೇರಿಯಾ ವೈದ್ಯಾಧಿಕಾರಿ ಡಾ. ದೀಪಕ್ ಆರ್. ಬೋಳಾರ್ ಇವರನ್ನು ಕಚೇರಿ 4277968 ಅಥವಾ ಮೊಬೈಲ್ 9448546266 ನ್ನು ಸಂಪರ್ಕಿಸಬಹುದು.