ಅತ್ಯಂತ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ಮುಗಿದ ಸಂದರ್ಭದಲ್ಲೇ ನಡೆದ ಈ ಘಟನೆ ದುರಾದೃಷ್ಟಕರ ಎಂದ ಅವರು, ಆಂಧ್ರ ಪೊಲೀಸರ ವಿರುದ್ಧ ಕೇಸು ದಾಖಲಿಸಿದ್ದು, ಈಗಾಗಲೇ ಮ್ಯಾಜಿಸ್ಟೀರಿಯಲ್ ತನಿಖೆ ಆರಂಬಿಸಲಾಗಿದೆ. ಇದಲ್ಲದೆ ಇಲಾಖೆ ಸ್ವತಂತ್ರವಾಗಿ ಪ್ರತ್ಯೇಕ ಕೇಸು ದಾಖಲಿಸಿದ್ದು, ಎಫ್ ಐ ಆರ್ ಮತ್ತು ಉಪಯೋಗಿಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.
ಈಗಾಗಲೇ ಬೆಂಗಳೂರಿನಿಂದ ಬಂದ ಬ್ಯಾಲೆಸ್ಟಿಕ್ ತಜ್ಞರು ಶವವನ್ನು ಮಹಜರು ಮಾಡಿದ್ದು, ಇದರ ಸಂಪೂರ್ಣ ವಿಡಿಯೋ ಚಿತ್ರೀಕರಣ ನಡೆಸಲಾಗಿದೆ. ತನಿಖೆಯಲ್ಲಿ ಯಾವುದೇ ರೀತಿಯ ಲೋಪಗಳಾಗದಂತೆ ಎಚ್ಚರಿಕೆ ವಹಿಸಲಾಗಿದೆ.ತನಿಖೆಯ ಹೊಣೆ ಹೊತ್ತಿರುವ ಪುತ್ತೂರು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಶವಪಂಚನಾಮೆ, ಸಾಕ್ಷ್ಯಗಳ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಆಂದ್ರ ತಂಡದ ನೇತೃತ್ವದ ವಹಿಸಿದ ಆಧಿಕಾರಿ ಘಟನೆ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದು, ಈ ಎಲ್ಲಾ ವರದಿಗಳನ್ನು ಜಿಲ್ಲಾ ದಂಡಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಆಂಧ್ರ ಪೊಲೀಸ ತಂಡದ ಮುಖ್ಯಸ್ಥರು ಮಂಗಳೂರಿಗೆ ಆಗಮಿಸಿದ್ದು, ಪ್ರಕರಣದ ಬಗ್ಗ ಕೂಲಂಕಷ ತನಿಖೆ ನಡೆಯಲಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆಯೂ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದರು. ಬೆಳ್ತಂಗಡಿ ಬಂದ್ ಶಾಂತಿಯುತವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಲು ಬಜರಂಗದಳದವರಿಗೆ ಅವಕಾಶ ನೀಡದೆ ಅವರ ಮನ ಒಲಿಸಲಾಗಿದೆ. ಪರಿಸರದಲ್ಲಿ ಸ್ವಇಚ್ಛೆಯಿಂದ ಬಂದ್ ಮಾಡುವವರನ್ನು ಇಲಾಖೆ ತಡೆದಿಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಾನೂನು ಭಂಗಿಸುವವರಿಗೆ ಶಿಕ್ಷೆ ಖಚಿತ ಎಂಬ ಸಂದೇಶವನ್ನು ನೀಡಿದ್ದಾರೆ.