Tuesday, May 26, 2009

ಕೃಷಿಕರಿಗೆ 120.79 ಕ್ವಿಂಟಾಲ್ ಭತ್ತದ ಬೀಜ ವಿತರಣೆ


ಮಂಗಳೂರು, ಮೇ 26:ದಕ್ಷಿಣ ಕನ್ನಡ ಜಿಲ್ಲೆಗೆ ಮುಂಗಾರು ಮಳೆ ಪ್ರವೇಶದ ಮುನ್ಸೂಚನೆಗಳು ದೊರೆತಿದ್ದು, ಮಳೆಯಾಧಾರಿತ ಭತ್ತದ ಕೃಷಿ ಹಾಗೂ ಉಪಬೆಳೆಗಳನ್ನು ಬೆಳೆಯುವ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಕೃಷಿ ಇಲಾಖೆ ಈಗಾಗಲೇ 120.79 ಕ್ವಿಂಟಾಲ್ ಭತ್ತದ ಬೀಜವನ್ನು ವಿತರಿಸಿದ್ದು, ರೈತರಿಂದ ಬೇಡಿಕೆಯ ಪ್ರಮಾಣವನ್ನು ಆಧರಿಸಿ ಭತ್ತದ ತಳಿಗಳನ್ನು ಮತ್ತು ರಸಗೊಬ್ಬರವನ್ನು ಪೂರೈಸಲು ಕೃಷಿ ಇಲಾಖೆ ಸಜ್ಜಾಗಿದೆ.
ರಾಷ್ಟ್ರೀಯ ವಿಕಾಸ ಯೋಜನೆಯಡಿ ಬೀಜಗಳನ್ನು ಶೇಕಡ 50ರ ರಿಯಾಯಿತಿ ದರದಲ್ಲಿ ಕ್ರಷಿ ಇಲಾಖೆ ನೀಡುತ್ತಿದ್ದು, ರೈತರು ಯೋಜನೆಯ ಸದುಪಯೋಗವನ್ನು ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.20ರಿಂದ 30ರಷ್ಟು ಸಸಿಮಡಿ(ನರ್ಸರಿ)ಕೆಲಸ ಆರಂಭಗೊಂಡಿದ್ದು,ಜೂನ್ ಮೊದಲ ವಾರದಲ್ಲಿ ನಾಟಿ ಆರಂಭವಾಗಬಹುದು. ಜಿಲ್ಲೆಯಲ್ಲಿ ಒಟ್ಟು 35,000 ಹೆಕ್ಟೇರ್ ಭತ್ತ ಬೆಳೆಯುವ ಗುರಿ ನಿಗದಿಯಾಗಿದ್ದು, ಕಳೆದ ಸಾಲಿನಲ್ಲಿ 32,845ಹೆಕ್ಟೇರ್ ಭತ್ತದ ಬೆಳೆಯಲಾಗಿತ್ತು. ರೈತರು ಅಧಿಕ ಇಳುವರಿ ಬೆಳೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕಳೆದ ಮುಂಗಾರು ಹಂಗಾಮಿನಲ್ಲಿ ಮಂಗಳೂರು ತಾಲೂಕಿನಲ್ಲಿ 12,510 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 11,728 ಹೆಕ್ಟೇರ್ ಪ್ರದೇಶದಲ್ಲಿ, ಬಂಟ್ವಾಳದಲ್ಲಿ 9,600 ಹೆ. ಕೃಷಿಪ್ರದೇಶದಲ್ಲಿ 9,372ಹೆಕ್ಟೇರ್ ಪ್ರದೇಶದಲ್ಲಿ, ಬೆಳ್ತಂಗಡಿಯ 8,500 ಹೆಕ್ಟೇರ್ ನಲ್ಲಿ 8285 ಹೆಕ್ಟೇರ್ ನಲ್ಲಿ, ಪುತ್ತೂರಿನ 3.900 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ 2975 ಹೆಕ್ಟೇರ್ ನಲ್ಲಿ, ಸುಳ್ಯದ 490 ಹೆಕ್ಟೇರ್ ಪ್ರದೇಶದಲ್ಲಿ 485 ಹೆಕ್ಟೇರ್ ನಲ್ಲಿ ಭತ್ತವನ್ನು ಬೆಳೆಯಲಾಗಿತ್ತು.
ಪ್ರಸಕ್ತ ಸಾಲಿನಲ್ಲಿಯೂ ಇದೇ ಗುರಿಯನ್ನು ನಿಗದಿಪಡಿಸಲಾಗಿದ್ದು, ರೈತರಿಗೆ ಹಲವು ಸೌಲಭ್ಯಗಳನ್ನು ಸರ್ಕಾರ ಘೋಷಿಸಿದೆ. ಭತ್ತದ ಬೀಜ ವಿತರಣೆಯಲ್ಲಿ ಮಂಗಳೂರು ತಾಲೂಕಿನಲ್ಲಿ 52.04 ಕ್ವಿಂಟಾಲ್, ಬಂಟ್ವಾಳದಲ್ಲಿ 36.50, ಬೆಳ್ತಂಗಡಿಯಲ್ಲಿ 18.75 ಕ್ವಿಂಟಾಲ್, ಪುತ್ತೂರಿನಲ್ಲಿ 6 ಕ್ವಿಂಟಾಲ್, ಸುಳ್ಯದಲ್ಲಿ 7.50 ಕ್ವಿಂಟಾಲ್ ನಂತೆ ಒಟ್ಟು 120.79 ಕ್ವಿಂಟಾಲ್ ಭತ್ತದ ಬೀಜವನ್ನು ಶೇಕಡಾ 50ರ ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ. ಒಟ್ಟು 297 ಫಲಾನುಭವಿಗಳು ಈ ಸೌಲಭ್ಯವನ್ನು ಬಳಸಿಕೊಂಡಿದ್ದು, 290.71 ಕ್ವಿಂಟಾಲ್ ಭತ್ತದ ಬೀಜ ದಾಸ್ತಾನಿದೆ.
ಜಯಾ ತಳಿಗೆಕೆ.ಜಿಗೆ 18 ರೂ.ಗಳಿದ್ದು, ರಿಯಾಯಿತಿ ದರದಲ್ಲಿ 9ರೂ.ನಂತೆ, ಎಂ ಒ 4ಕ್ಕೆ 20ರೂ.ಗಳಿದ್ದು,ರಿಯಾಯಿತಿ ದರ 10ರೂ., ಜ್ಯೋತಿ 19ರೂ.ಗಳಿದ್ದು, ರಿಯಾಯಿತಿ ದರ 9.50, ಉಮಾ 20ರೂ.ಗಳಿದ್ದು, ರಿಯಾಯಿತಿ ದರ 10ರೂ.ಗಳಂತೆ ರೈತರಿಗೆ ವಿತರಿಸಲಾಗಿದೆ. ರೈತರಿಂದ ಬರುವ ಬೇಡಿಕೆಯನ್ನು ಅನುಸರಿಸಿ ಅಗತ್ಯ ಬೀಜಗಳನ್ನು ಸರಬರಾಜು ಮಾಡಲಾಗುವುದು ಎಂದಿರುವ ಕೃಷಿ ಇಲಾಖೆ, ಪ್ರಸಕ್ತ ಸಾಲಿನಲ್ಲಿಯೂ ಭತ್ತದ ಬೆಳೆಯನ್ನು ಪ್ರೋತ್ಸಾಹಿಸಲು ಹಲವು ಪ್ರಶಸ್ತಿಗಳನ್ನು ಘೋಷಿಸಿದೆ.
ಬೆಳೆ ಪ್ರಶಸ್ತಿ ಯೋಜನೆಯಡಿ ರೈತರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು ರೈತ ಸಂಪರ್ಕ ಕೇಂದ್ರದಿಂದ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಪಡೆದು ಆಗಸ್ಟ 31ರೊಳಗೆ ಸಲ್ಲಿಸಲು ಕೋರಿದೆ.
ಕೃಷಿ ಪಂಡಿತ ಪ್ರಶಸ್ತಿಯಡಿ ಕೃಷಿ ನಿರ್ದೇಶನಾಲಯಕ್ಕೆ ಅರ್ಜಿ ಸಲ್ಲಿಸಲು 15.6.09 ಕೊನೆಯ ದಿನವಾಗಿದ್ದು, ಅರ್ಜಿಗಳು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ.
ಬೆಳೆವಿಮೆ: ಮಳೆಯಾಶ್ರಿತ ಭತ್ತಕ್ಕೆ ಬೆಳೆವಿಮೆಯಡಿ ನೋಂದಾಯಿಸಿಕೊಳ್ಳಲು ರೈತರಿಗೆ ಅವಕಾಶವಿದ್ದು, ಒಂದು ಹೆಕ್ಟೇರ್ ಗೆ ಪ್ರೀಮಿಯಂ 365 ರೂ.ಗಳಂತೆ ಆಸಕ್ತ ರೈತರು ತಮ್ಮ ಹೆಸರನ್ನು ಸ್ಥಳೀಯ ಸಹಕಾರಿ ಬ್ಯಾಂಕ್ ಅಥವಾ ಸಂಘಗಳಲ್ಲಿ 31.7.09ರೊಳಗೆ ನೋಂದಾಯಿಸಲು ಅವಕಾಶವಿದೆ.
ಇನ್ನು ಸಾವಯವ ಕೃಷಿ ಮಿಷನ್ ಯೋಜನೆ ಪ್ರಸಕ್ತ ಸಾಲಿನಲ್ಲಿ ಜಾರಿಗೊಂಡಿದ್ದು, ಪ್ರತೀ ತಾಲೂಕಿಗೆ 24.5 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ. ರೈತರು ಈ ಸಂಬಂಧ ಹೆಚ್ಚಿನ ಮಾಹಿತಿಗೆ ತಾಲೂಕು ಮಟ್ಟದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯ ಸದ್ಬಳಕೆ ಮಾಡಬಹುದಾಗಿದೆ.