ಮಂಗಳೂರು, ಮೇ.9: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತಗಳ ಎಣಿಕೆ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಮೇ 16ರಂದು ಯಾವುದೇ ಗೊಂದಲಗಳಿಲ್ಲದೆ ಮತ ಎಣಿಕೆ ಕಾರ್ಯ ನಿರ್ವಹಣೆಗೆ ಇಂದು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜು ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಕಾಲೇಜಿನ 15 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದ್ದು, 35 ಅಧಿಕಾರಿಗಳು ಕಾರ್ಯನಿರ್ವಹಣೆಯ ಹೊಣೆಯನ್ನು ಹೊತ್ತಿರುತ್ತಾರೆ. ಪ್ರತೀ ಎ ಆರ್ ಒ ಗೆ 3 ಜನ ಸಹಾಯಕರನ್ನು ಒದಗಿಸಲಾಗಿದ್ದು, ಮತ ಎಣಿಕೆ ಸಂದರ್ಭದಲ್ಲಿ ಸುಸೂತ್ರವಾಗಿ ಕೆಲಸಗಳು ನೆರವೇರಲು ಎಲ್ಲರಿಗೂ ಪ್ರತ್ಯೇಕ ತರಬೇತಿಯನ್ನು ನೀಡಲಾಗುತ್ತಿದ್ದು, ಮೇ 11ಕ್ಕೆ ಇನ್ನೊಂದು ಸುತ್ತಿನ ತರಬೇತಿ, ಡಿಗ್ರೂಪ್ ನೌಕರರಿಗೆ ಮೇ 14ರಮದು ತರಬೇತಿಯನ್ನು ನೀಡಲಾಗುವುದು. ಮತ ಎಣಿಕೆ ದಿನದಂದು ಬೆ. 5 ಗಂಟೆಗೆ ಸಿಬ್ಬಂದಿಗಳನ್ನು ವಿವಿಧ ವಿಭಾಗಕ್ಕೆ ಆಯ್ಕೆ ಮಾಡಿ ಕಳುಹಿಸಲಾಗುವುದು. ಮತ ಎಣಿಕೆ ಸ್ಥಳದಲ್ಲಿ ಸಿಬ್ಬಂದಿಗಳಿಗೆ ನೆರವಾಗಲು ಪ್ರತ್ಯೇಕ ಪಡೆ, ಫಲಿತಾಂಶ ಘೋಷಿಸಲು ಒಂದು ತಂಡವನ್ನು ರೂಪಿಸಲಾಗುವುದು ಎಂದು ಕೇಂದ್ರ ಮುಖ್ಯ ಸ್ಥಾನಿಕ ಅಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ವಿವರಿಸಿದರು.
ಮತ ಎಣಿಕೆಯ ಸ್ಥಳದಲ್ಲಿ ಗುರುತು ಪತ್ರ ಇದ್ದವರಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಡಳಿತ ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿತು. ಸಭೆಯಲ್ಲಿ ಸಹಾಯಕ ಆಯುಕ್ತರು, ತಹಸೀಲ್ದಾರರು ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಜರಿದ್ದರು.