ಮಂಗಳೂರು, ಮೇ 18: ರಾಷ್ಟ್ರೀಯ ಹೆದ್ದಾರಿ 48ರ ನೆಲ್ಯಾಡಿ ಸಮೀಪದ ಉದನೆ ಪರಿಸರದಲ್ಲಿ ಇಂದು ನಸುಕಿನ ವೇಳೆ 5 ಗಂಟೆಗೆ ಸಂಭವಿಸಿದ ಕೆ ಎಸ್ ಆರ್ ಟಿ ಸಿ ಐರಾವತ ಬಸ್ ಹಾಗೂ ಟಿಂಬರ್ ಲಾರಿ ನಡುವೆ ಅಪಘಾತದಲ್ಲಿ 5 ಮಂದಿ ಮೃತಪಟ್ಟಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಅಪಘಾತದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜೀವಿಶಾಸ್ತ್ರ, ಪರಿಸರ, ಬಂದರು, ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರು ಖೇದ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈಗಾಗಲೇ ಮೃತರ ಕುಟುಂಬಕ್ಕೆ 2.5 ಲಕ್ಷ ರೂ. ಪರಿಹಾರ ಘೋಷಿಸಲಾಗಿದ್ದು, ಗಾಯಾಳುಗಳ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.
ರಸ್ತೆಯಲ್ಲಿ ಅನಧಿಕೃತ ವಾಹನ ನಿಲುಗಡೆಯಿಂದ ಈ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ರಸ್ತೆ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದ್ದು, ಈ ಪ್ರದೇಶದಲ್ಲಿ ಶಾಶ್ವತ ಹೆದ್ದಾರಿ ಗಸ್ತುಪಡೆ ನಿಯೋಜನೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದ ಅವರು, ತಕ್ಣಣದ ಕ್ರಮಕ್ಕೆ ಈ ಸಂಬಂಧ ಉಪ್ಪಿನಂಗಡಿ ಪೊಲೀಸರಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.