ಮಂಗಳೂರು, ಮೇ 24: ಅಭಿವೃದ್ಧಿಯೇ ರಾಜ್ಯ ಸರ್ಕಾರದ ಮೂಲಮಂತ್ರವಾಗಿದ್ದು,ಅದರಲ್ಲೂ ಬಡವರು ಮತ್ತು ಗ್ರಾಮೀಣಾಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ; ಬಡವರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಹಲವು ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ವಿತರಿಸುವ ಸಾಲಸೌಲಭ್ಯವೂ ಒಂದಾಗಿದ್ದು, ಅರ್ಹರು ಯೋಜನೆಗಳ ಸದುಪಯೋಗವನ್ನು ಪಡೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಪಲೇಮಾರ್ ಹೇಳಿದರು.
ಅವರು ಮೇ 23ರಂದು ಬಂಟ್ವಾಳದ ಲಯನ್ಸ್ ಕ್ಲಬ್ ನಲ್ಲಿ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಮತ್ತು ದಿ. ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮ ಏರ್ಪಡಿಸಿದ್ದ ಫಲಾನುಭವಿಗಳಿಗೆ ಚೆಕ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಿಗಮದ ವತಿಯಿಂದ ಗಂಗಾ ಕಲ್ಯಾಣ,ಶ್ರಮ ಶಕ್ತಿ ಮತ್ತು ಮೈಕ್ರೋ ಫೈನಾನ್ಸ್ ಯೋಜನೆಯಡಿ 287 ಫಲಾನುಭವಿಗಳನ್ನು ಗುರುತಿಸಿ 68 ಲಕ್ಷ ರೂ.ಸಾಲಸೌಲಭ್ಯವನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ಶ್ರೀ ರಮಾನಾಥ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ ಶೆಟ್ಟಿ, ಮಂಗಳೂರು ಎಂ ಎಲ್ ಎ ಯು ಟಿ ಖಾದರ್, ಬಂಟ್ವಾಳ ನಿಗಮದ ಅಧ್ಯಕ್ಷ ಎನ್. ಬಿ. ಅಬೂಬಕ್ಕರ್, ತಾ.ಪಂ.ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ,ಪುರಸಭೆಯ ಉಪಾಧ್ಯಕ್ಷ ಮೊಹಮ್ಮದ್ ಇಕ್ಬಾಲ್ ಭಾಗವಹಿಸಿದ್ದರು. ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀ ಎಸ್ ಡಿ ಸೋಮಪ್ಪ ಸ್ವಾಗತಿಸಿದರು.