
ಮಂಗಳೂರು, ಮೇ 31: ಮುಂದುವರಿದ ಸುಶಿಕ್ಷಿತ ಜನರಿರುವ ಜಿಲ್ಲೆಯೆಂಬ ಹೆಗ್ಗಳಿಕೆಯಿರುವ ದಕ್ಷಿಣ ಕನ್ನಡದಲ್ಲೂ ಲಿಂಗಾನುಪಾತದಲ್ಲಿ ಕಂಡು ಬಂದಿರುವ ವ್ಯತ್ಯಾಸ ಆಘಾತಕಾರಿಯಾಗಿದ್ದು, ಈ ಬಗ್ಗೆ ಸಾಮಾಜಿಕ ಜವಾಬ್ದಾರಿ, ಜಾಗೃತಿಯ ಹೊಣೆ ಪ್ರತಿಯೊಬ್ಬರದ್ದು ಎಂದು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಹೇಳಿದರು.
ಇಂದು ಐಎಂಎ ಕಟ್ಟಡ, ಅತ್ತಾವರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹೆಣ್ಣು ಮಗುವಿನ ಸಂರಕ್ಷಣೆ ಅಂಗವಾಗಿ ಜಿಲ್ಲಾ ಸಕ್ಷಮ ಪ್ರಾಧಿಕಾರ ಆಶ್ರಯದಲ್ಲಿ ಎಲ್ಲಾ ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರು, ಖಾಸಗಿ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ರೇಡಿಯಾಲಾಜಿಸ್ಟ್ ಗಳಿಗೆ ಏರ್ಪಡಿಸಲಾಗಿದ್ದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಮಾಡುವ ತಂತ್ರ ದುರ್ಬಳಕೆ ಮತ್ತು ನಿಷೇಧ ಕಾಯಿದೆ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ದಿನಗಳಲ್ಲಿ ಸಾಮಾಜಿಕ ಕೆಡುಕುಗಳ ವಿರುದ್ಧ ಧ್ವನಿಯೆತ್ತುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ಎಲ್ಲರೂ ಸಾಮಾಜಿಕ ಹೊಣೆಯ ಬಗ್ಗೆ ಚಿಂತಿಸಲು ಇದು ಸಕಾಲವಾಗಿದೆ ಎಂದ ಜಿಲ್ಲಾಧಿಕಾರಿಗಳು ಕಾನೂನಿಂದ ಮಾತ್ರ ಕೆಡುಕುಗಳ ನಿವಾರಣೆ ಅಸಾಧ್ಯ ಎಂದರು. ಜಿಲ್ಲೆಯು ಕೇವಲ ಆರ್ಥಿಕ ಅಭಿವೃದ್ಧಿ ಹೊಂದಿದರೆ ಮಾತ್ರ ಮುಂದುವರಿದ ಜಿಲ್ಲೆ ಎಂದು ಗುರುತಿಸಲ್ಪಡುವುದಿಲ್ಲ; ಸಾಮಾಜಿಕ ಬದುಕು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ; ಹಾಗಾಗಿ ಇಂತಹ ಮಾಹಿತಿ ಕಾರ್ಯಾಗಾರಗಳು ಇಂದಿನ ಅಗತ್ಯವಾಗಿದೆ ಎಂದರು. ಕಾನೂನುಗಳಲ್ಲು ಸಕಾಲಿಕ ಬದಲಾವಣೆಯ ಅಗತ್ಯವನ್ನು ಜಿಲ್ಲಾಧಿಕಾರಿಗಳು ಒತ್ತಿ ಹೇಳಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸತ್ರ ನ್ಯಾಯಾಧೀಶ ಶ್ರೀ ವಿ.ಸಿ. ಹಟ್ಟಿ ಅವರು ಮಾತನಾಡಿ, ಇತಿಹಾಸ ಹಾಗೂ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿದಾಗ ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ನಿರೀಕ್ಷಿತ ಸ್ಥಾನ ಮಾನ ಸಿಕ್ಕಿಲ್ಲವೆಂಬ ಸತ್ಯ ಅರಿವಾಗುತ್ತದೆ ಎಂದರು. ನಾವು ವೈಜ್ಞಾನಿಕವಾಗಿ ಬಹಳಷ್ಟು ಮುಂದುವರಿದಿದ್ದರೂ ನಿಸರ್ಗಕ್ಕೆ ತನ್ನದೇ ಆದ ಶಕ್ತಿಯಿದೆ. ಮಾನವನ ಸ್ವಾರ್ಥದಿಂದ ನೈಸರ್ಗಿಕ ಜೀವನ ದುರ್ಬಳಕೆಯಾದಾಗ ಜೀವನ ಸಮತೋಲನ ತಪ್ಪುತ್ತದೆ; ಹೀಗಾದಾಗ ದುರಂತಗಳು ಸಂಭವಿಸುತ್ತದೆ. ಕಾನೂನುಗಳು ಸಮಯಕ್ಕೆ ಅನುಗುಣವಾಗಿ ಬದಲಾಗುವ ಅಗತ್ಯವಿದ್ದು, ಇಂತಹ ಕಾರ್ಯಾಗಾರಗಳಲ್ಲಿ ಅಭಿಪ್ರಾಯಗಳು ರೂಪುಗೊಂಡು ಅವುಗಳು ಕಾನೂನುಗಳಾಗುವಂತೆ ಅಥವಾ ಕಾನೂನಿನಲ್ಲಿ ಸೂಕ್ತ ಮಾರ್ಪಾಡುಗಳಾಗುವಂತೆ ಮಾಡಲು ಸಾಧ್ಯವಾಗುತ್ತದೆ ಎಂದ ಅವರು, ಅನಿಷ್ಠ ಸಂಪ್ರದಾಯವಾದ ಭ್ರೂಣಹತ್ಯೆ ತಡೆಗೆ ಎಲ್ಲರ ಸಹಕಾರ ಅಗತ್ಯವಿದ್ದು, ಇದರಿಂದ ಮಾತ್ರ ಉತ್ತಮ ಸಮಾಜ ಸಾಧ್ಯ ಎಂದು ಹೇಳಿದರು. ಕಾರ್ಯಾಗಾರದಲ್ಲಿ ವಸ್ತುನಿಷ್ಠ ಸಮಸ್ಯೆಗಳು ಮತ್ತು ಕಾನೂನಿನ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯಿತು.
ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಕಾನೂನು ಸಲಹೆಗಾರರಾದ ಶ್ರೀಮತಿ ರಾಜೇಶ್ವರಿ ದೇವಿ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಲೈಂಗಿಕ ಅಸಮತೋಲನದ ಬಗ್ಗೆ ವಿವರವನ್ನು ನೀಡಿದರು. ಇವರ ಪ್ರಕಾರ ಚಾಮರಾಜ ನಗರ ಉಳಿದೆಲ್ಲ ಜಿಲ್ಲೆಗಳಿಗೆ ಮಾದರಿಯಾಗಿದ್ದು, ಮುಂದುವರಿದವರೆಂದು ಹೇಳಿಕೊಳ್ಳುವ ಎಲ್ಲರೂ ಸೋಲಿಗರಿಂದ ಕಲಿಯಬೇಕಾದ ಹಲವು ವಿಷಯಗಳನ್ನು ಕಾರ್ಯಾಗಾರದಲ್ಲಿ ವಿವರಿಸಿದರು. ಕೋಲಾರ ಹಿಂದುಳಿದ ಜಿಲ್ಲೆಯಾದರೂ ಇಲ್ಲಿ ಹೆಣ್ಣು ಗಂಡುಗಳ ಪ್ರಮಾಣ ಉತ್ತಮವಾಗಿದೆ. ಜಿಲ್ಲೆಯಲ್ಲಿ ಪ್ರಸವ ಪೂರ್ವ ಲಿಂಗಪತ್ತೆಯ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಮತ್ತು ಡಾಕ್ಟರುಗಳು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಮುಖ್ಯ ನ್ಯಾಯಾಧೀಶರಾದ ಶ್ರೀ ಶಿವಲಿಂಗೇಗೌಡ, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನ ಶ್ರೀಮತಿ ಹಿಲ್ಡಾ ರಾಯಪ್ಪನ್, ಕೆ ಎಂ ಸಿ ಪ್ರೊಫೆಸರ್ ಡಾ. ರತಿದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಕುಂತಳಾ ಡಾ. ಮೋಹನ್ ದಾಸ್ ಭಂಡಾರಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗನ್ನಾಥ್ ಅವರು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಭ್ರೂಣ ಹತ್ಯೆ ರಹಿತ ಜಿಲ್ಲೆಯಾಗಲಿ ದ.ಕ ಎಂಬ ಆಶಯದೊಂದಿಗೆ ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ ರುಕ್ಮಿಣಿ ಅವರು ತಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕು. ಸ್ಮಿತ ಪ್ರಾರ್ಥಿಸಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ರಾಮಕೃಷ್ಣ ವಂದಿಸಿದರು. ಕಾರ್ಯಾಗಾರದಲ್ಲಿ ರೇಡಿಯಾಲಜಿಸ್ಟ್ ಡಾ. ರಾಘವೇಂದ್ರ ಭಟ್, ಲೇಡಿಗೋಷನ್ ಆಸ್ಪತ್ರೆಯ ಡಾಕ್ಟರ್ ಗಳು ಪ್ರಸಕ್ತ ಸಮಸ್ಯೆಗಳನ್ನು ಕಾನೂನು ಸಲಹೆಗಾರರಿಗೆ ಮನವರಿಕೆ ಮಾಡಿದರು.