Wednesday, July 10, 2013

ಬಸ್ಸುಗಳಲ್ಲಿ ಹಿರಿಯ ನಾಗರೀಕರಿಗೆ ಅನುಕೂಲ ಕಲ್ಪಿಸಲು ಕ್ರಮ_ಆರ್.ಟಿ.ಓ

ಮಂಗಳೂರು, ಜುಲೈ. 10:- ನಗರ ಸಾರಿಗೆ ಹಾಗೂ ಸರ್ವಿಸ್ ಬಸ್ಸುಗಳಲ್ಲಿ ಹಿರಿಯ ನಾಗರೀಕರನ್ನು ಗೌರವದಿಂದ ಕಾಣುವ ಪರಿಸರನ್ನುಂಟು ಮಾಡುವುದು ಹಾಗೂ ಅವರಿಗೆ ಮೀಸಲಾದ ಸ್ಥಳಗಳಲ್ಲಿ ಇತರೆ ಜನರು ಕುಳಿತಿದ್ದರೆ ಅವರು ಬಂದ ಕೂಡಲೇ ತೆರವು ಮಾಡಿ ಅವರಿಗೆ ಅನುವು ಮಾಡಿಕೊಡಲು ಸಾರ್ವಜನಿಕರಲ್ಲಿ ಹಾಗೂ ಶಾಲಾ ಕಾಲೇಜು ಮಕ್ಕಳಲ್ಲಿ ಅರಿವು ಮೂಡಿಸಲಾಗುವುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಅವರಿಂದು ತಮ್ಮ ಕಚೇರಿಯಲ್ಲಿ ನಡೆದ ಸಾರಿಗೆ ಅದಾಲತ್ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಹಸನಬ್ಬ ಎನ್ನುವವರು ರಸ್ತೆಯ ಇಕ್ಕೆಡೆಗಳಲ್ಲಿನ ಕಾಲುದಾರಿಯನ್ನು ಮುಕ್ತವಾಗಿರಿಸಿ ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುವು ಮಾಡಿ ಕೊಡುವಂತೆ ಮಾಡಿದ ಮನವಿಯನ್ನು, ಪರಿಗಣಿಸಲಾಗುವುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದರು.
ಕೆಲವು ಮಾರ್ಗಗಳಲ್ಲಿ ಕೆಲವೊಂದು ನಗರ ಸಾರಿಗೆ ಬಸ್ಸುಗಳು ಕೊನೇ ನಿಲ್ದಾಣದ ವರೆಗೂ ಹೋಗದೇ ಮದ್ಯದಲ್ಲೇ ಪ್ರಯಾಣಿಕರನ್ನು ಇಳಿಸುತ್ತಿರುವ ಬಗ್ಗೆ ಸಭೆಯಲ್ಲಿ ದೂರಿದಾಗ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದರು.
ಹನುಮಂತ ಕಾಮತ್ ಅವರು ಮಾತನಾಡಿ ನಗರದ ಪಿವಿಎಸ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ಮಾರ್ಗದಲ್ಲಿ ರಾತ್ರಿ 8 ಗಂಟೆಯ ನಂತರ ಖಾಸಗಿ ಬಸ್ಸುಗಳು ಇಡೀ ಮಾರ್ಗವನ್ನು ಆಕ್ರಮಿಸಿರುತ್ತಾರೆ. ಇದರಿಂದ ಇತರೆ ವಾಹನಗಳಿಗೆ ಕಿರಿಕಿರಿಯಾಗುತ್ತಿದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಸಂಚಾರಿ ಎಸಿಪಿ ಸುಬ್ರಹ್ಮಣ್ಯರವರು ಕೂಡಲೇ ಈ ಬಗ್ಗೆ ಪರಿಶೀಲಿಸಿ ಸಂಚಾರಿ ಪೋಲೀಸರನ್ನು ನೇಮಿಸಲಾಗುವುದೆಂದರು.
ತೊಕ್ಕೊಟ್ಟು ಜಂಕ್ಷನ್ನಲ್ಲಿ ರಾತ್ರಿ ಸಂಚರಿಸುವ ಬಸ್ಸುಗಳು ಅಲ್ಲಿಯ ನಿಲ್ದಾಣಕ್ಕೆ ಆಗಮಿಸದೇ ನೇರವಾಗಿ ಮುಂದೆ ಸಾಗುವುದರಿಂದ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವವರು  ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದಾಗ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆರ್ ಟಿ ಓ ತಿಳಿಸಿದರು. 
ನಾಗರೀಕರ ಎಲ್ಲಾ ಸಮಸ್ಯೆಗಳನ್ನು ಸಾರಿಗೆ ಪ್ರಾಧಿಕಾರದ ಗಮನಕ್ಕೆ ತಂದು ಪರಿಹರಿಸುವುದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದರು.