Monday, May 21, 2012

ಸೀಟು ಹಂಚಿಕೆ ಪಟ್ಟಿ ನೋಟೀಸ್ ಬೋರ್ಡಿ ನಲ್ಲಿ ಪ್ರದರ್ಶಿಸಿ: ಜಿಲ್ಲಾಧಿಕಾರಿ

ಮಂಗಳೂರು,ಮೇ.21: ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಪದವಿಪೂರ್ವ ಕಾಲೇಜುಗಳ ನೋಟೀಸು ಬೋರ್ಡಿನಲ್ಲಿ ಸೀಟು ಹಂಚಿಕಾ ಪಟ್ಟಿ(ಸೀಟ್ ಮ್ಯಾಟ್ರಿಕ್ಸ್) ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಜಿಲ್ಲೆಯ ಎಲ್ಲ ಪ್ರಾಂಶುಪಾಲರಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಪಿಯುಸಿ ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಜಿಲ್ಲಾಧಿಕಾರಿಗಳು, ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸರ್ಕಾರದ ಸುತ್ತೋಲೆಯಂತೆ ದಾಖಲಾತಿಗಳು ನಡೆಯಬೇಕು; ನೋಟೀಸ್ ಬೋರ್ಡಿನಲ್ಲಿ ಹಾಗೂ ಕಾಲೇಜುಗಳ ವೆಬ್ ಸೈಟ್ ಗಳಲ್ಲಿ ಈ ಸಂಬಂದ ಸೂಕ್ತ ಮಾಹಿತಿಗಳಿರಬೇಕು ಎಂದರು.
ಇಲಾಖೆ ನಿಗದಿಪಡಿಸಿದಂತೆ ಅಡ್ಮಿಷನ್ ಪ್ರಕ್ರಿಯೆಗಳಾಗಬೇಕೆಂದ ಅವರು, ಈ ಸಂಬಂಧ ಪರಿಶೀಲನೆ ನಡೆಸಲು ಜಿಲ್ಲಾ ಮಟ್ಟದ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ತಂಡ ಕಾಲೇಜುಗಳಿಗೆ ಭೇಟಿ ನೀಡಲಿದೆ. ನೋಟೀಸು ಬೋರ್ಡಿನಲ್ಲಿ ವೇಳಾಪಟ್ಟಿ, ವಿದ್ಯಾರ್ಥಿಳ ಸೇರ್ಪಡೆ ಪಟ್ಟಿ, ಕ್ಯಾಟಗರಿ ವೈಸ್ ವಿದ್ಯಾರ್ಥಿಗಳ ಪಟ್ಟಿ, ಸರ್ಕಾರ ಶುಲ್ಕ ನಿಗದಿಪಡಿಸಿದ ಮಾದರಿ, ಟ್ಯೂಷನ್ ಫೀ ಎಲ್ಲ ಮಾಹಿತಿಗಳನ್ನು ಪಾರದರ್ಶಕವಾಗಿ ನೀಡಬೇಕು ಎಂದರು.
ಪ್ರವೇಶ ಪ್ರಕ್ರಿಯೆ ವೇಳೆ ಇನ್ನೊಂದು ಎಂಟ್ರೆನ್ಸ್ ಪರೀಕ್ಷೆ ಸಲ್ಲದು ಎಂಬ ನಿಯಮವನ್ನು ಪಾಲಿಸಲು ಸೂಚಿಸಿದ ಅವರು, ಆದಾಯ ಮತ್ತು ಜಾತಿ ದೃಢೀಕರಣಪತ್ರ ಐದು ವರ್ಷ ಸಿಂಧುವಾಗಿದ್ದು, ಪ್ರತೀ ವರ್ಷ ಹೊಸ ಪತ್ರ ಕೇಳುವ ಅಗತ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಹಿಂದುಳಿದ ವರ್ಗಗಳವರಿಗೆ ಆದಾಯ ಮಿತಿ ಗರಿಷ್ಠ 11,000 ರೂ.ಗಳಾಗಿದ್ದು, ಪ್ರವೇಶದ ವೇಳೆ ಮೂಲಪ್ರತಿಯನ್ನು ವಿದ್ಯಾರ್ಥಿಗಳಿಂದ ಪಡೆಯುವ ಅಗತ್ಯವಿಲ್ಲ, ಸರ್ಟಿಫೈ ಮಾಡಿದ ಪ್ರತಿಗಳನ್ನು ಪಡೆದುಕೊಳ್ಳಿ ಎಂದೂ ಜಿಲ್ಲಾಧಿಕಾರಿಗಳು ಸೂಚಿಸಿದರು.
ಎಲ್ಲ ಪ್ರಾಂಶುಪಾಲರೂ ಪ್ರವೇಶಾತಿ ಸಂಬಂಧದ ಮಾಹಿತಿಯನ್ನು ಸವಿವರವಾಗಿ www.pue.kar.nic ಇಲ್ಲಿಂದ ಪಡೆದುಕೊಂಡು ಪ್ರವೇಶಾತಿ ಪ್ರಕ್ರಿಯೆ ನಡೆಸುವುದರಿಂದ ಗೊಂದಲ ಸೃಷ್ಟಿ ನಿವಾರಿಸಬಹುದು. ವಿದ್ಯಾರ್ಥಿಗಳಿಗೆ ಸರ್ಕಾರದ ಮಾದರಿ ಪ್ರವೇಶ  ಪತ್ರಗಳನ್ನೇ ನೀಡಿ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಹಾಗೂ ಡಿಡಿಪಿಯು (ಪ್ರಭಾರ) ರಾಜವೀರ ಇಂದ್ರ ಸಭೆಯಲ್ಲಿ ಉಪಸ್ಥಿತರಿದ್ದರು.