ಮಂಗಳೂರು, ಮೇ.07 : ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 400 ಮೀ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಕಾಮಗಾರಿ ಬಗ್ಗೆ ನಿಯಮಿತವಾಗಿ ಪರಿಶೀಲನೆ ಗಳನ್ನು ನಡೆಸಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿಗಾಗಿ ತಾಂತ್ರಿಕ ಸಮಿತಿ ಮತ್ತು ಮೇಲ್ವಿಚಾರಣಾ ಸಮಿತಿ ಕೂಲಂಕಷ ಪರಿಶೀಲನೆ ನಡೆಸುತ್ತಿದೆ.
ಕಾಮಗಾರಿಯ ಅಭಿವೃದ್ಧಿ ಹಾಗೂ ಗುಣ ಮಟ್ಟದ ಬಗ್ಗೆ ವಿಧಾನ ಸಭಾ ಉಪಸಭಾಪತಿಗಳಾದ ಎನ್ ಯೋಗೀಶ್ ಭಟ್ ಮತ್ತು ಜಿಲ್ಲಾ ಕ್ರೀಡಾಂಗಣ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಗಳಾದ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಇಂದು ಕಾಮಗಾರಿಯ ಪರಿಶೀಲನೆ ಮತ್ತು ಸಭೆಯನ್ನು ಕ್ರೀಡಾಂಗಣದಲ್ಲಿ ನಡೆಸಿದರು.
ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಬೆಂಗಳೂರಿನ ಸಹಾಯಕ ಅಭಿಯಂತರರಾದ ಎಸ್ ಹರೀಶ್ ಅವರು ಏಪ್ರಿಲ್ 13ರಂದು ಕಾಮಗಾರಿ ಅಭಿವೃದ್ಧಿಯನ್ನು ಪರಿಶೀಲಿಸಿ, ಸಲ್ಲಿಸಿದ ವರದಿಯ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಕಾಮಗಾರಿಯನ್ನು ನಿರ್ವಹಿಸುತ್ತಿರುವ ಸಿನ್ ಕಾಟ್ಸ್ ಇಂಟರ್ ನ್ಯಾಷನಲ್ ನ ಗೋಪಾಲ್ ಅವರಿಗೆ ಕಾಮಗಾರಿ ನಿರ್ವಹಣೆಯಲ್ಲಿ ವೆಟ್ ಮಿಕ್ಷ್ ಅಳವಡಿಸುವ ವೇಳೆ ಜೆಲ್ಲಿಯ ಮಿಶ್ರಣಕ್ಕೆ ನೀರು ನಿಗದಿತ ಪ್ರಮಾಣದಲ್ಲಿ ಬಳಸುವ ಬಗ್ಗೆ ಹಾಗೂ ವೈ ಬ್ರೇಟರ್ ರೋಲರನ್ನು ಬಳಸಬೇಕೆಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈಗಾಗಲೇ ಡಿ ಏರಿಯಾದ ಮಧ್ಯಭಾಗದ ಅಳತೆಯನ್ನು 23 ಮೀಟರ್ ಗೆ ವಿಸ್ತರಿಸಿ ವಿಸ್ತೀರ್ಣವನ್ನು 1170 ಚದರ ಮೀಟರಿಗೆ ವಿಸ್ತರಿಸಲಾಗಿದೆ. ಜಾವೆಲಿನ್ ಎಸೆತಕ್ಕೆ ಅನುಕೂಲವಾಗುವಂತೆ ನಕ್ಷೆಯಲ್ಲಿ ತೋರಿಸಿರುವಂತೆ ಟ್ರ್ಯಾಕ್ ಸೇರಿ 35 ಮೀಟರ್ ಗೆ (23+10+2=35 ಮೀಟರ್ )ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಸ್ಟೀಪಲ್ ಚೇಸ್ ಸ್ಪರ್ಧೆಯ ನೀರಿನ ತೊಟ್ಟಿ (3.66 ಮೀ(wxe)ಥ 3.55ಮೀ (nxs)ಥ 0.7ಮೀ Depth) ಯನ್ನು ಉತ್ತರಭಾಗದ ಡಿ ಏರಿಯಾದಲ್ಲಿ ನಿರ್ಮಿಸಲಾಗುವುದು.
ಸಮಗ್ರ ಒಳಚರಂಡಿ ವ್ಯವಸ್ಥೆ ರೂಪಿಸುವ ಬಗ್ಗೆ ಕ್ರೀಡಾಂಗಣದ ಪಶ್ಚಿಮದ 2 ಮುಖ್ಯ ದ್ವಾರದ ಪಕ್ಕದಲ್ಲಿ ಹೊರಗಡೆಯ ನೀರು ಕ್ರೀಡಾಂಗಣದ ಒಳಗಡೆ ಹೋಗದಂತೆ 2 ಕಡೆಗಳಲ್ಲಿ CowCatch ಹಾಕುವುದು, ಹರ್ಡಲ್ಸ್ ಸ್ಪರ್ಧೆಯನ್ನು ನಡೆಸಲು ತೆಗೆದುಕೊಂಡ ಕ್ರಮ, ಟ್ರಾಕಿನ ಅಳತೆ ಮಾಡಲು ಸಿ ಡಿ ಆರ್ ಪಾಯಿಂಟ್ಸ್ (79 ಮೀಟರ್) ಹಾಕಿದ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ತಾಂತ್ರಿಕ ಸಮಿತಿಯ ಸದಸ್ಯರು ಮತ್ತು ಯುವಜನ ಮತ್ತು ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ್ ಉಪಸ್ಥಿತರಿದ್ದರು.