ಮಂಗಳೂರು,ಮೇ.09: ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ `ನಂಬರ್ ವನ್' ಸ್ಥಾನದಲ್ಲಿದ್ದು ಮುಖ್ಯಮಂತ್ರಿಗಳಿಂದಲೂ ಶ್ಲಾಘನೆಗೆ ಪಾತ್ರವಾಗಿದೆ. 2012-13ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಸಂಬಂಧಿಸಿ 10.72 ಕೋಟಿ ಯೋಜನೆ ಅನುಷ್ಠಾನದ ಗುರಿಯನ್ನು ನಿಗಮ ಹೊಂದಿದೆ ಎಂದು ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಿಗಮದಲ್ಲಿ ಯೋಜನೆಯನ್ನು ಅನುಷ್ಟಾನಗೊಳಿಸಲು ಸಿಬ್ಬಂದಿ, ಸೂಪರ್ವೈಸರ್ಸ್ ಗಳನ್ನು ನೇಮಕ ಮಾಡಲಾಗಿದ್ದು, ಸರಕಾರ ಕೂಡ ಪೂರಕ ಅನುದಾನ ನೀಡುತ್ತಿದೆ ಎಂದರು.ಈ ಹಿಂದಿಗಿಂತ ಸಾಲ ಮರು ಪಾವತಿ ಕೂಡ ನಿಗದಿತ ಸಮಯದೊಳಗೆ ಆಗುತ್ತಿದ್ದು, ರಾಜ್ಯದಲ್ಲಿ ಇದರ ಪ್ರಮಾಣ ಶೇ. 80ರಷ್ಟು ಇದೆ. ಹಾಸನ ಪ್ರಥಮ, ಉಡುಪಿ ದ್ವಿತೀಯ, ಮಂಡ್ಯ ತೃತೀಯ ಸ್ಥಾನದಲ್ಲಿದ್ದರೆ, ಸಾಲ ಮರುಪಾವತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ ಎಂದರು.
ಮೂರು ವರ್ಷ ಹತ್ತು ತಿಂಗಳಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಗಳ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದ ಅವರು, ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಉದ್ಯೋಗ ನೀಡಲು ಆದ್ಯತೆಯನ್ನು ನೀಡಿದೆ ಎಂದರು. ಸ್ವಾವಲಂಬನ ಮಾರ್ಜಿನ್ ಹಣ ಸಾಲ ಮತ್ತು ಸಹಾಯಧನ ಯೋಜನೆಯಡಿ 228 ಮಂದಿಗೆ ರೂ.43.2 ಲಕ್ಷ ಸಹಾಯಧನ, ಅರಿವು ಸಾಲ ಯೋಜನೆ ಯಡಿ 1188 ಮಂದಿಗೆ ರೂ.2,37,60,000, ಶ್ರಮಶಕ್ತಿ ಸಾಲ ಯೋಜನೆಯಡಿ 648 ಮಂದಿಗೆ ರೂ.1,29,60,000, ಮೈಕ್ರೋ ಸಾಲ ಮತ್ತು ಮೈಕ್ರೋ ಸಹಾಯಧನ ಯೋಜನೆಯಲ್ಲಿ 1,728 ಮಂದಿಗೆ ರೂ.1,72,80,000, ಗಂಗಾ ಕಲ್ಯಾಣ ಯೋಜನೆಯಡಿ 120 ಮಂದಿಗೆ ರೂ.1.20ಲಕ್ಷ ಸೇರಿ ಒಟ್ಟು 2,972 ಮಂದಿಗೆ ರೂ.70.32 ಲಕ್ಷ ಒದಗಿಸುವ ಗುರಿ ಹೊಂದಲಾಗಿದೆ ಎಂದವರು ವಿವರಿಸಿದರು.
ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಅರಿವು ಮತ್ತು ಶ್ರಮಶಕ್ತಿ ಯೋಜನೆಗೆ ಸಂಬಂಧಿಸಿ ತಲಾ 409 ಮಂದಿಗೆ ತಲಾ ರೂ.81.80ಲಕ್ಷ, ಮೈಕ್ರೋ ಸಾಲ ಮತ್ತು ಮೈಕ್ರೋ ಸಹಾಯಧನ ಯೋಜನೆಯಲ್ಲಿ 817 ಮಂದಿಗೆ ರೂ.81.70 ಲಕ್ಷ , ಮನೆ ಕಟ್ಟಡ ಬಡ್ಡಿ ಸಹಾಯಧನ ಯೋಜನೆಯಡಿ 164 ಮಂದಿಗೆ 1.23 ಲಕ್ಷ, ಸೇರಿ ಒಟ್ಟು 1,799 ಮಂದಿಗೆ ರೂ.36830000 ಒದಗಿಸುವ ಗುರಿ ಹೊಂದಲಾಗಿದೆ ಎಂದವರು ವಿವರಿಸಿದರು.
ಅಲ್ಪಸಂಖ್ಯಾತರ ಪರ ಮುತುವರ್ಜಿ ವಹಿಸಿರುವ ರಾಜ್ಯ ಸರಕಾರ ನಿಗಮಕ್ಕೆ 2008-09ರಲ್ಲಿ 46.70 ಕೋಟಿ, 2009-10ರಲ್ಲಿ ರೂ.41.45 ಕೋಟಿ ಮತ್ತು 2010-11ರಲ್ಲಿ 56 ಕೋಟಿ,2011-12ರಲ್ಲಿ 95 ಕೋಟಿ ಹಾಗೂ 2012-13ರ ಸಾಲಿನಲ್ಲಿ 120 ಕೋಟಿ ಅನುದಾನವನ್ನು ಮೀಸಲಿರಿಸುವ ಮೂಲಕ ಅಲ್ಪ ಸಂಖ್ಯಾತರ ಪರವಾಗಿರುವ ಸರಕಾರ ಎಂಬ ಹೆಮ್ಮೆಗೆ ಪಾತ್ರವಾಗಿದೆ ಎಂದು ಅಬೂಬಕ್ಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ಪ್ ಅಧ್ಯಕ್ಷ ಉಸ್ಮಾನ್ ಹಾಜಿ, ಕ್ರಿಶ್ಟಿಯನ್ ಅಭಿವೃದ್ಧಿ ಘಟಕದ ಜೆರಾಲ್ಡಿನ್ ಡಿಸೋಜ ಉಪಸ್ಥಿತರಿದ್ದರು