Friday, May 18, 2012

ಆಸ್ತಿಗಳ ಹಕ್ಕು ದಾಖಲೆ ನಿರ್ಧರಿಸುವ ಯೋಜನೆ

ಮಂಗಳೂರು,ಮೇ.18:ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ವತಿಯಿಂದ ಕರ್ನಾಟಕ ಭೂಕಂದಾಯ ಅಧಿನಿಯಮ 1964 ನಿಯಮಗಳು 1966 ರ ಶಾಸನ ಬದ್ಧ ವಿಧಿಗಳನ್ವಯ  ರಾಜ್ಯದ ನಗರ ಪ್ರದೇಶದ ಎಲ್ಲಾ ಆಸ್ತಿಗಳ ನಕ್ಷೆ ತಯಾರಿಸುವಿಕೆ ಮತ್ತು ಮಾಲಿಕತ್ವವನ್ನು ನಿರ್ಧರಿಸಿ ಹಕ್ಕು ದಾಖಲೆಗಳನ್ನು ಸಿದ್ಧ ಪಡಿಸುವ ಮಹತ್ವ ಪೂರ್ಣ ಯೋಜನೆಯನ್ನು ಪ್ರಾರಂಭಿಸಿದೆ.
    ಮಂಗಳೂರು ನಗರವು ಸಹ ಆಯ್ದ 5 ಪಟ್ಟಣಗಳಲ್ಲಿ ಒಂದು ಪಟ್ಟಣವಾಗಿರುತ್ತದೆ. ಈ ಯೋಜನೆಯನ್ನು ಇನ್ಫೋಟೆಕ್ ಎಂಟರ್ಪ್ರೈಸಸ್ ಲಿಮಿಟೆಡ್ ಇವರೊಂದಿಗೆ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕೈಗೊಳ್ಳಲಾಗುವುದು.ಈ ಕಾರ್ಯವನ್ನು ಪ್ರಾರಂಭದಲ್ಲಿ ಬೋಳೂರು ಗ್ರಾಮ ವಾರ್ಡ್ ಸಂಖ್ಯೆ 27,28,29 ರಲ್ಲಿ ಪ್ರಾರಂಭಿಸಲಾಗುವುದು.ಭೂಮಾಪನ ಇಲಾಖೆಯ ಸಿಬ್ಬಂದಿಯು ಕೈಗೊಳ್ಳಲಾಗುತ್ತಿರುವ  ಈ ಕೆಲಸಕ್ಕೆ ಅಗತ್ಯ ಸಹಕಾರ ಮತ್ತು ನೆರವನ್ನು ನೀಡಲು ಎಲ್ಲಾ ಆಸ್ತಿಗಳ ಮಾಲೀಕರನ್ನು ಕೋರಲಾಗಿದೆ.
    ನಗರಪಾಲಿಕೆ ಖಾತಾ ಹಕ್ಕನ್ನು ನಿರೂಪಿಸುವ ದಾಖಲೆ ಎಂಬ ಸಾಮಾನ್ಯ ಭಾವನೆ ಸಾರ್ವಜನಿಕರಲ್ಲಿ ಇರುತ್ತದೆ. ಆದರೆ ಭೂಕಂದಾಯ ಅಧಿನಿಯಮ ಮತ್ತು ನಿಯಮಗಳ ಮೇರೆಗೆ ಕ್ರಮ ಬದ್ಧವಾಗಿ ಸಿದ್ಧಪಡಿಸಲಾಗುವ ಆಸ್ತಿ ದಾಖಲೆ (ನಮೂನೆ 13) ನಗರ ಆಸ್ತಿಗಳ ಮಾಲಿಕತ್ವವನ್ನು ನಿರೂಪಿಸುವ ಶಾಸನಬದ್ಧ ಹಕ್ಕು ದಾಖಲೆ ಆಗಿರುತ್ತದೆ.
         ಈ ಆಸ್ತಿ ದಾಖಲೆಯು ಕೃಷಿ ಜಮೀನುಗಳ ಆರ್.ಟಿ.ಸಿ.ಗೆ (ನಮೂನೆ 16) ಸರಿ ಸಮಾನವಾದ ದಾಖಲೆ ಆಗಿರುತ್ತದೆ. ನಗರ ಪ್ರದೇಶದಲ್ಲಿ ಹೆಚ್ಚು ಮೌಲ್ಯವುಳ್ಳ ಆಸ್ತಿಗಳಿಗೆ ನಿಖರವಾದ ಗಡಿಗಳನ್ನು ಗುರುತಿಸಿ ಎಲ್ಲಾ ಇಲಾಖೆಗಳ ದಾಖಲೆಗಳನ್ನು ಪರಿಶೀಲಿಸಿ ಹಕ್ಕುಗಳನ್ನು ನಿರ್ಧರಿಸಿ ತಯಾರಿಸಲಾಗುವ ನಗರ ಆಸ್ತಿಗಳ ಹಕ್ಕು ಪತ್ರ(ಪಿ.ಆರ್. ಕಾರ್ಡ್) ಅತ್ಯಂತ ಮಹತ್ವ ಪೂರ್ಣವಾಗಿರುತ್ತದೆ. ಇದು ಸರಕಾರ ,ಸಾರ್ವಜನಿಕರಿಗೆ ಹಣಕಾಸು ಸಂಸ್ಥೆ,ಬ್ಯಾಂಕ್ ,ಖಾಸಗಿ ವ್ಯಕ್ತಿಗಳೊಂದಿಗೆ ವ್ಯವಹರಿಸುವ ಕೆಲಸ ಕಾರ್ಯಗಳನ್ನು ಸುಲಭಗೊಳಿಸುತ್ತದೆ ಮತ್ತು ನಂಬಿಕೆಯ ಅರ್ಹತೆಯನ್ನು ಹೊಂದಿರುತ್ತದೆ. ಸರ್ಕಾರವು ಸಾರ್ವಜನಿಕರ ಹಿತದೃಷ್ಠಿಯಿಂದ ಕೈಗೊಳ್ಳಲಾಗುತ್ತಿರುವ ಈ ಯೋಜನೆಯಲ್ಲಿ ಇತರೆ ಇಲಾಖೆಗಳು  ಆವಶ್ಯಕ ದಾಖಲೆಗಳನ್ನು ಒದಗಿಸುವ ಮೂಲಕ ಸಹಕರಿಸುತ್ತಿವೆ. ಕಾರಣ ಈ ಮೂಲಕ ಎಲ್ಲಾ  ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,ಯೋಜನೆ ಅನುಷ್ಠಾನಕ್ಕಾಗಿ ತಮ್ಮ ಆಸ್ತಿಯ ಅಳತೆಗೆ ಭೇಟಿ ನೀಡುವ ಇಲಾಖೆಯ ಸಿಬ್ಬಂದಿಗಳಿಗೆ ತಮ್ಮ ಆಸ್ತಿಗಳ ಗಡಿಗಳನ್ನು ತೋರಿಸುವುದಲ್ಲದೆ ತಮ್ಮಲ್ಲಿರುವ ಮಾಲಿಕತ್ವವನ್ನು ನಿರೂಪಿಸುವ ದಾಖಲೆಗಳ ನಕಲುಗಳನ್ನು ನೀಡಿ ಆಸ್ತಿ ಪತ್ರಗಳನ್ನು ಸಿದ್ಧಪಡಿಸಲು ಸಹಕರಿಸಿ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.