Thursday, May 3, 2012

`ಸಕಾಲ' ಸೇವೆಗೆ ಪ್ರತ್ಯೇಕ ಅರ್ಜಿಯ ಅಗತ್ಯವಿಲ್ಲ

ಮಂಗಳೂರು,ಮೇ.03:`ಸಕಾಲ,- ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ-2011 ರಾಜ್ಯಾದ್ಯಂತ ಜಾರಿಗೆ ಬಂದು 1 ತಿಂಗಳಾಗಿದೆ. ಸರ್ಕಾರದ 11 ಇಲಾಖೆಗಳ ಒಟ್ಟು 151 ಸೇವೆಗಳನ್ನು ಸಾರ್ವಜನಿಕರಿಗೆ ವಿಳಂಬವಿಲ್ಲದೆ ನಿಗದಿಪಡಿಸಿದ ದಿನದಂದು ನೀಡಲಾಗುತ್ತಿದೆ. ಇದರೊಂದಿಗೆ ಸಕಾಲದಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಸರ್ಕಾರದ ಆಶಯವು ಬಹುಪಾಲು ಈಡೇರಿದಂತಾಗಿದೆ.
`ಸಕಾಲ'ದ ಕುರಿತು ಸಾರ್ವಜನಿಕರಲ್ಲಿ ಒಂದಿಷ್ಟು ಗೊಂದಲಗಳಿವೆ. ಸಕಾಲಕ್ಕೆಂದು ಪ್ರತ್ಯೇಕ ಅರ್ಜಿ ಸಲ್ಲಿಸಬೇಕೆ? ಈ ಅರ್ಜಿ ನಮೂನೆಗಳು ಎಲ್ಲಿ ದೊರೆಯುತ್ತವೆ? ನಾವು ಇದಕ್ಕೆ ಪ್ರತ್ಯೇಕ ಶುಲ್ಕ ಭರಿಸಬೇಕೆ? ಸಕಾಲ ಎಲ್ಲರಿಗೂ ಅನ್ವಯವಾಗುತ್ತದೆಯೇ? ಇದರಲ್ಲಿ ಪಾರದರ್ಶಕತೆ ಇದೆಯೇ? ನಮಗೆ ನ್ಯಾಯ ಸಲ್ಲುತ್ತದೆಯೇ ಎನ್ನುವ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ.
`ಸಕಾಲ' ಯೋಜನೆಯಡಿಯಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಿಲ್ಲ. ಈಗ ಈ ಕಾಯ್ದೆಯ ವ್ಯಾಪ್ತಿಗೆ ಬರುವ ಇಲಾಖೆಗಳು ತಾವು ನೀಡುವ ಸೇವೆಗಳ ಕುರಿತು ಸಾರ್ವಜನಿಕರು ಸಲ್ಲಿಸಬೇಕಾದ ಅರ್ಜಿ ನಮೂನೆಗಳನ್ನು ಈಗಾಗಲೇ ಹೊಂದಿವೆ. ಇವುಗಳ ಮೇಲೆ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ ಎನ್ನುವ ಮುದ್ರೆ ಇರುತ್ತದೆ. ಉದಾಹರಣೆಗೆ, ಜನನ/ಮರಣ ಪ್ರಮಾಣ ಪತ್ರ ಪಡೆಯಬೇಕಾದಲ್ಲಿ ಸಾರ್ವಜನಿಕರು ಸಲ್ಲಿಸಬೇಕಾದ ಅರ್ಜಿ ಸಕಾಲ ಕಾಯಿದೆ ಬರುವ ಮುಂಚೆ ಇದ್ದಂತೆಯೇ ಇದೆ. ಅದರ ಮೇಲೆ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ ಎಂದು ಮುದ್ರಿಸಲಾಗಿದೆ.
ಸಾರ್ವಜನಿಕರು ಈ ಹಿಂದೆ ಈ ಸೇವೆಗಳನ್ನು ಪಡೆಯಲು ಭರಿಸಬೇಕಾಗುತ್ತಿದ್ದ ಶುಲ್ಕವನ್ನೇ ಈಗಲೂ ಪಾವತಿ ಮಾಡಬೇಕು.
ಈ ಅರ್ಜಿಗಳನ್ನು ಸ್ವೀಕರಿಸಿದ ಇಲಾಖೆ ಅದಕ್ಕಾಗಿ ಸ್ವೀಕೃತಿ ರೂಪದಲ್ಲಿ ಒಂದು ಹಿಂಬರಹವನ್ನು ನೀಡುತ್ತದೆ. ಇದರಲ್ಲಿ ಹದಿನಾಲ್ಕು ಸಂಖ್ಯೆಗಳ ಗ್ರಾಹಕ ಗುರುತಿನ ನಂಬರ್ ಇರುತ್ತದೆ. ಸಕಾಲದ ಕಾಲ್ ಸೆಂಟರಿಗೆ ದೂರವಾಣಿ ಮಾಡಿ ಈ ಗುರುತಿನ ಸಂಖ್ಯೆಯನ್ನು ಹೇಳಿದಲ್ಲಿ ಅರ್ಜಿಯ ಸ್ಥಿತಿಯನ್ನು ತಿಳಿಸಲಾಗುತ್ತದೆ. ಈ ಉದಾಹರಣೆ ಉಳಿದೆಲ್ಲ ಸೇವೆಗಳಿಗೂ ಅನ್ವಯವಾಗುತ್ತದೆ.
www.sakala.kar.nic.in/ ನಲ್ಲಿ ಪಡೆಯಬಹುದಾಗಿದೆ.
`ಸಕಾಲ'ಕ್ಕೆ ಜನಸಾಮಾನ್ಯರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸರ್ಕಾರದಲ್ಲಿ ತಮಗೆ ಅಗತ್ಯವಿರುವ ಸೇವೆಗಳು ಸುಲಭವಾಗಿ ಮತ್ತು ಶೀಘ್ರವಾಗಿ ಕೈಸೇರುತ್ತಿರುವ ಬಗ್ಗೆ ಸಮಾಧಾನವೂ ಇದೆ. ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವೆಬ್ಸೈಟ್ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಈ ವೆಬ್ ಸೈಟಿನಿಂದ ಸಕಾಲದಡಿ ಸ್ವೀಕರಿಸಲಾದ/ತಿರಸ್ಕರಿಸಲಾದ/ವಿಲೇವಾರಿಯಾದ ಅರ್ಜಿಗಳ ಎಲ್ಲ ವಿವರಗಳನ್ನೂ ಪಡೆದುಕೊಳ್ಳಬಹುದಾಗಿದೆ. ಇದೊಂದು ಸಂಪೂರ್ಣ ಪಾರದರ್ಶಕ ವ್ಯವಸ್ಥೆಯಾಗಿದ್ದು, ಇದಕ್ಕಾಗಿ ಸಾರ್ವಜನಿಕರು ಯಾವುದೇ ಹೆಚ್ಚುವರಿ ಶುಲ್ಕವನ್ನು ನೀಡಬೇಕಾಗಿಲ್ಲ.