ಮಂಗಳೂರು,ಮೇ. 11:ಕರ್ನಾಟಕ ಸರ್ಕಾರ ಅಲ್ಪ ಸಂಖ್ಯಾತರ ಹಿತ ಕಾಯುವಲ್ಲಿ ಅನೇಕ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಿದ್ದು,ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ 2012-13 ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿಯಲ್ಲಿ 3972 ಫಲಾನುಭವಿಗಳಿಗೆ ಒಟ್ಟು 703.20 ಲಕ್ಷ ಸಾಲ ಸೌಲಭ್ಯ ನೀಡಲು ಗುರಿ ಹೊಂದಲಾಗಿದೆ.
ಅಂತೆಯೇ ಮೇಲ್ಕಂಡ ಅವಧಿಯಲ್ಲಿ ಸ್ವಾವಲಂಬನಾ ಸಬ್ಸಿಡಿ ಮತ್ತು ಮಾರ್ಜಿನ್ ಸಾಲ ಯೋಜನೆಯಡಿ ವಿವಿಧ ವಾಣಿಜ್ಯ ಬ್ಯಾಂಕುಗಳ ಸಹಕಾರದೊಂದಿಗೆ 288 ಜನ ಅಲ್ಪಸಂಖ್ಯಾತರಿಗೆ ಸಾಲ ಒದಗಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯನ್ವಯ ಕನಿಷ್ಠ ರೂ.10,000 ಹಾಗೂ ಗರಿಷ್ಠ ರೂ.1.00 ಲಕ್ಷ ಸಾಲ ನೀಡಲಾಗುವುದು.
ಅರಿವು ಸಾಲ ಯೋಜನೆಯಡಿ ಅಲ್ಪ ಸಂಖ್ಯಾತರ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಅವರಿಗೆ ವೃತ್ತಿ ಶಿಕ್ಷಣ ಉನ್ನತ ಶಿಕ್ಷಣಕ್ಕಾಗಿ ಕನಿಷ್ಠ ರೂ.5000/- ಗರಿಷ್ಠ ರೂ.50,000/- ಗಳ ವರೆಗೆ ಶೇಕಡಾ 2 ರ ಬಡ್ಡಿ ದರದಲ್ಲಿ 1188 ವಿದ್ಯಾರ್ಥಿಗಳಿಗೆ 237.60 ಲಕ್ಷ ರೂ.ಗಳ ಸಾಲ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ.ಗ್ರಾಮೀಣ ಕುಶಲಕರ್ಮಿಗಳು ಹಾಗೂ ವೃತ್ತಿ ಕುಲಕಸುಬುದಾರರ ಹಾಗೂ ಇತರ ಸಣ್ಣಪುಟ್ಟ ವೃತ್ತಿ ಅವಲಂಬಿತರಿಗೆ ಶ್ರಮಶಕ್ತಿ ಸಾಲ ಯೋಜನೆಯಡಿ ಕನಿಷ್ಠ ರೂ.10,000/- ಗಳಿಂದ ಗರಿಷ್ಠ ರೂ.20,000/- ಗಳ ಸಾಲವನ್ನು ಶೇಕಡಾ 4 ರ ಬಡ್ಡಿ ದರದಲ್ಲಿ ರೂ.129.60 ಲಕ್ಷಗಳನ್ನು 648 ಫಲಾನುಭವಿಗಳಿಗೆ ಹಂಚುವ ಗುರಿಯಿದೆ.
ಮತೀಯ ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆದಾರರಿಗೆ ವ್ಯಾಪಾರ ವಹಿವಾಟು ಕೈಗೊಳ್ಳಲು ಸ್ವಸಹಾಯ ಗುಂಪುಗಳ ಮೂಲಕ ಕಿರು ಸಾಲ ಯೋಜನೆಯಡಿ 1728 ಫಲಾನುಭವಿಗಳಿಗೆ ಗರಿಷ್ಠ ತಲಾ ರೂ.10,000/- ಗಳ ಸಾಲವನ್ನು ಶೇಕಡಾ 25 ಸಹಾಯಧನದೊಂದಿಗೆ ನೀಡುವ ಗುರಿ ಹೊಂದಲಾಗಿದೆ. ಅದೇ ರೀತಿ ವೈಯಕ್ತಿಕ ಗಂಗಾ ಕಲ್ಯಾಣ ಯೋಜನೆಯಡಿ ಒಂದೇ ಕಡೆ 2 ಎಕ್ರೆ ಜಮೀನು ಇರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಹೊಂದುವ ಸಲುವಾಗಿ ಕೊಳವೆ ಬಾವಿ ಕೊರೆಸುವಿಕೆ ಅಥವಾ ತೆರೆದ ಬಾವಿ ತೆಗೆದು ಪಂಪ್ ಸೆಟ್ ಅಳವಡಿಸಲು ವಿದ್ಯುದ್ಧೀಕರಣಕ್ಕಾಗಿ ತಲಾ 1.00 ಲಕ್ಷ ಸಾಲವನ್ನು 120 ರೈತರಿಗೆ ನೀಡುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ನೇರ ಸಾಲ ಯೋಜನೆಯಡಿ ರೂ.50,000/- ಅಥವಾ ರೂ.1.00 ಲಕ್ಷ ಗಳವರೆಗೆ ವ್ಯಾಪಾರ ಚಟುವಟಿಕೆ ಕೈಗೊಳ್ಳಲು ಅಥವಾ ಅಟೋ ರಿಕ್ಷಾ ಕೊಳ್ಳಲು ಶೇಕಡಾ 6 ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.
ಆಸಕ್ತ ದಕ್ಷಿಣಕನ್ನಡ ಜಿಲ್ಲೆಯ ನಿವಾಸಿ ಮುಸ್ಲಿಂ,ಕ್ರೈಸ್ತ,ಸಿಕ್,,ಜೈನ್,ಪಾರ್ಸಿ ಮತ್ತು ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸೇರಿದ ಕುಟುಂಬದ ವಾರ್ಷಿಕ ವರಮಾನ ರೂ.22,000/- ಗಳಿಗಿಂತ ಕಡಿಮೆ ಇರುವ 18 ರಿಂದ 55 ವರ್ಷದೊಳಗಿನ ಅಲ್ಪ ಸಂಖ್ಯಾತರು ಸೌಲಭ್ಯ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು 30-6-12 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಹಾಗೂ ಅರ್ಜಿ ನಮೂನೆಗಳನ್ನು ಪಡೆಯಲು ಜಿಲ್ಲಾ ವ್ಯವಸ್ಥಾಪಕರು,ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ (ನಿ) 2 ನೇ ಮಹಡಿ,ಕೊಟ್ಟಾರ ,ಮಂಗಳೂರು ಇಲ್ಲಿಂದ ಪಡೆಯಬಹುದು.ನಿಗಮದ ವೆಬ್ ಸೈಟ್ <http://kmdc.kar.nic.in> ನಿಂದಲೂ ಅರ್ಜಿಗಳನ್ನು ಪಡೆಯಬಹುದಾಗಿದೆ.