ಮಂಗಳೂರು, ಮೇ 16: ಆಹಾರ ಸೃಷ್ಟಿಯಲ್ಲಿ ಸ್ವಾವಲಂಬಿಗಳಾಗುವ ಜೊತೆಗೆ ಮನೆಯ ಅಂದವನ್ನು ಹೆಚ್ಚಿಸುವಲ್ಲಿ ತಾರಸಿ ತೋಟ ನಗರವಾಸಿಗಳಿಗೆ ವರದಾನ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ವಿಜಯಪ್ರಕಾಶ್ ಅಭಿಪ್ರಾಯ ಪಟ್ಟರು.
ಅವರು ಇಂದು ನಗರದ ಕದ್ರಿಯ ಬಾಲಭವನದಲ್ಲಿ ಟೆರೇಸ್ ಗಾರ್ಡನ್ (ತಾರಸಿ ತೋಟ) ಬಗ್ಗೆ ಆಯೋಜಿಸಲಾದ ತರಬೇತಿ ಕಾರ್ಯಕ್ರಮವನ್ನು ಕುಂಡದಲ್ಲಿ ಬೆಳೆಯಲಾದ ಎಲೆಕೋಸು ಗಿಡಗಳಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಹಸಿರು ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ತಾರಸಿ ಕೃಷಿ ಹೆಚ್ಚು ಆರೋಗ್ಯಕರ ಹಾಗೂ ತಾಜಾ ತರಕಾರಿಯು ಬೆಳೆದವರಿಗೆ ಲಭ್ಯವಾಗಲಿದೆ. ನಮ್ಮ ಮಕ್ಕಳಲ್ಲಿಯೂ ತೋಟದ ಪರಿಕಲ್ಪನೆ, ಪ್ರಕೃತಿಯ ಬಗ್ಗೆ ಕುತೂಹಲ, ಕಾಳಜಿ ಬೆಳೆಸುವಲ್ಲಿಯೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಹಾಗೂ ಅವರದ್ದೇ ತೋಟದಿಂದ ಆರೋಗ್ಯಕರ ತರಕಾರಿ ಬೆಳೆದು ಸೇವಿಸಲು `ಶಾಲಾವನ' ಯೋಜನೆ ರೂಪುಪಡೆಯಲಿದೆ ಎಂದು ಸಿಇಒ ಹೇಳಿದರು. ಕಾರ್ಯಾಗಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಭಾಂಗಣ ಆಸಕ್ತರಿಂದ ತುಂಬಿದೆ. ಜನರಲ್ಲಿ ತಾರಸಿ ತೋಟದ ಬಗ್ಗೆ ಇರುವ ಸಕಾರಾತ್ಮಕ ಧೋರಣೆಗೆ ಇದು ಸಾಕ್ಷಿ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ, ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಂಗಳೂರಿನ ರಾಜೇಂದ್ರ ಹೆಗ್ಡೆ ಹಾಗೂ ಅನುಪಮಾ ಭಟ್ ತಾರಸಿ ತೋಟದ ಬಗ್ಗೆ ಮಾಹಿತಿ ನೀಡಿದರು. ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ರಾವ್ ಆರೂರು ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಡಾ. ನಂದಾ ಸ್ವಾಗತಿಸಿದರು. ಹೇಮಾ ದಿನೇಶ್ ಪ್ರಾರ್ಥಿಸಿದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.