ಮಂಗಳೂರು,ಜೂನ್.29:ಪ್ರಸ್ತುತ 2011-12 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ 203 ಗ್ರಾಮ ಪಂಚಾಯತ್ ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯ ಅನುಷ್ಠಾನಕ್ಕಾಗಿ ಕೂಡಲೇ ಅಕುಶಲ ಕೂಲಿ ಕಾರ್ಮಿಕರು 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ದೈಹಿಕ ಶಕ್ತರು ತಮ್ಮ ಹೆಸರನ್ನು ಗ್ರಾಮ ಪಂಚಾಯತ್ ನಲ್ಲಿ ನೊಂದಾಯಿಸಿ ಉದ್ಯೋಗ ಚೀಟಿ ಪಡೆದು ಕೆಲಸಕ್ಕಾಗಿ ಅರ್ಜಿ ಸಲ್ಲಿಸಬೇಕು.ಆಗ ಅವರಿಗೆ ಉದ್ಯೋಗ ನೀಡಿ ಕೂಲಿ ಹಣವನ್ನು ನೀಡಲಾಗುವುದು.ಉದ್ಯೋಗ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು. ಅರ್ಜಿ ನಮೂನೆಯನ್ನು ಉಚಿತವಾಗಿ ಗ್ರಾಮ ಪಂಚಾಯತ್ ಕಚೇರಿಗಳಿಂದ ಪಡೆದು ಭರ್ತಿ ಮಾಡಿ ಅದೇ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಗ್ರಾಮ ಪಂಚಾಯತ್ ಕಚೇರಿಗಳಲ್ಲಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿಯವರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅಕುಶಲ ಕೆಲಸ ಮಾಡಲು ಇಚ್ಚಿಸುವ ಕುಟುಂಬವೊಂದಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ಮಾನವ ದಿನಗಳ ಕೆಲಸ ನೀಡಿ ಅವರ ಜೀವನ ಭದ್ರತೆ ಒದಗಿಸಲಾಗುವುದು.
2010-11 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗಿದ್ದು, ಜಿಲ್ಲೆಗೆ ಲಭ್ಯವಿರುವ ಅನುದಾನ ರೂ.3896.609 ಲಕ್ಷದಲ್ಲಿ ,203 ಗ್ರಾಮ ಪಂಚಾಯತ್ ಗಳ 17012 ಕಾಮಗಾರಿಗಳಿಗೆ ರೂ.1822.390 ಲಕ್ಷ ವೆಚ್ಚ ಮಾಡಲಾಗಿದೆ. ಈ ವೆಚ್ಚದಲ್ಲಿ ಅಕುಶಲ ಕೂಲಿ ಬಾಬ್ತು ರೂ.1056.941 ಲಕ್ಷ , ಕುಶಲ ಕೂಲಿ ಬಾಬ್ತು ರೂ.40.810 ಲಕ್ಷ ಮತ್ತು ಸಾಮಾಗ್ರಿಗಳಿಗೆ ರೂ.594.157 ಲಕ್ಷ ವೆಚ್ಚ ಮಾಡಲಾಗಿದೆ.
ಈ ಯೋಜನೆಯಡಿ ಮಾರ್ಚ್ 2011 ರ ಅಂತ್ಯದವರೆಗೆ 90502 ಕುಟುಂಬಗಳು ನೊಂದಣಿ ಮಾಡಿರುತ್ತದೆ. ಈ ಪೈಕಿ 90266 ಕುಟುಂಬಗಳಿಗೆ ಉದ್ಯೋಗ ಚೀಟಿಗಳನ್ನು ನೀಡಲಾಗಿದೆ. ಇದರಲ್ಲಿ 25357 ಕುಟುಂಬಗಳ ಸದಸ್ಯರಿಗೆ 8,87,836 ಕೆಲಸವನ್ನು ನೀಡಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಯಾವುದೇ ದೂರುಗಳು ಇದ್ದಲ್ಲಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದೂ.ಸಂ.0824-2451036,ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ 08255-233339,ಬೆಳ್ತಂಗಡಿ 08256-232026,ಮಂಗಳೂರು-0824-2423675,ಪುತ್ತೂರು 08251-232361,ಸುಳ್ಯ 08257-230336 ಇವರಿಗೆ ದೂರವಾಣಿಯಲ್ಲಿ ದೂರು ಸಲ್ಲಿಸಬಹುದಾಗಿದೆಯೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು ತಿಳಿಸಿರುತ್ತಾರೆ.