ಮಂಗಳೂರು,ಜೂನ್.06:ಕರ್ನಾಟಕ ಕಡಲ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ, 1986 ರನ್ವಯ ಕರ್ನಾಟಕ ಸರ್ಕಾರವು ಅಧಿಸೂಚನೆ ಸಂಖ್ಯೆ: ಪಸಂಮೀ 12 ಮೀಇಇ 2007 ದಿನಾಂಕ: 30-07-2007 ರಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಸೇರಿದಂತೆ ಕರ್ನಾಟಕ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಎಲ್ಲಾ ಯಾಂತ್ರಿಕ ದೋಣಿಗಳ ಮುಖಾಂತರ, ಹಾಗೂ 10 ಅಶ್ವಶಕ್ತಿ ಸಾಮಥ್ರ್ಯಕ್ಕಿಂತ ಮೇಲ್ಪಟ್ಟ ಇನ್ ಬೋರ್ಡ್ ಅಥವಾ ಔಟ್ ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 15ನೇ ದಿನಾಂಕದಿಂದ ಆಗಸ್ಟ್ 10ನೇ ದಿನಾಂಕದ ವರೆಗೆ (ಉಭಯ ದಿನಗಳು ಸೇರಿ) ಅಂದರೆ ಒಟ್ಟು 57 ದಿನಗಳ ನಿಷೇಧವನ್ನು ಹೇರಿ ಆದೇಶ ಹೊರಡಿಸಿರುತ್ತದೆ.
ಅದರಂತೆ ಮೇಲ್ಕಂಡ ಅಧಿಸೂಚನೆಯಲ್ಲಿ ನೀಡಲಾದ ಸೂಚನೆಗಳನ್ನು ಎಲ್ಲಾ ಯಾಂತ್ರೀಕೃತ ದೋಣಿ ಮೀನುಗಾರರು ಕಡ್ಡಾಯವಾಗಿ ಪಾಲಿಸುವಂತೆ ಈ ಮೂಲಕ ತಿಳಿಸಲಾಗಿದೆ. ಈ ಸೂಚನೆಗಳನ್ನು ಉಲ್ಲಂಘಿಸಿ ಹಾಗೂ ನಿಷೇದಾಜ್ಞೆಯನ್ನು ಮೀರಿ ಸದ್ರಿ ಅವಧಿಯಲ್ಲಿ ಮೀನುಗಾರಿಕೆಯನ್ನು ಮಾಡಿದ್ದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಸದ್ರಿ ಅವಧಿಯಲ್ಲಿ ಏನಾದರೂ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆಂದು ಹಾಗೂ ಈ ಬಗ್ಗೆ ಸರ್ಕಾರದಿಂದ ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ. ಈ ಆದೇಶವನ್ನು ಉಲ್ಲಂಘಿಸುವ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿಗೆ ಸರ್ಕಾರದಿಂದ ನೀಡುವ ಮಾರಾಟ ಕರ ರಹಿತ ಡೀಸಿಲ್ ಅಲ್ಲದೆ ಇತರ ಯಾವುದೇ ಸಹಾಯ ಸೌಲಭ್ಯವನ್ನು ರದ್ದು ಗೊಳಿಸಲಾಗುವುದೆಂದು ತಿಳಿಸಲಾಗಿದೆ.ಮೀನುಗಾರಿಕಾ ನಿಷೇಧದ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರವು ಕರಾವಳಿ ಪ್ರದೇಶದ ಎಲ್ಲಾ ಮೀನುಗಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೊರಡಿಸಲಾಗಿರುವುದರಿಂದ ಎಲ್ಲಾ ಮೀನುಗಾರರು ಈ ಆದೇಶವನ್ನು ಪಾಲಿಸಿ ಸರ್ಕಾರದೊಂದಿಗೆ ಸಹಕರಿಸುವಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.