ಮಂಗಳೂರು,ಆ.21:ಕೃಷಿ ಮತ್ತು ಕೃಷಿಕರ ಮೇಲೆ ಇದುವರೆಗೆ ಬಹಳಷ್ಟು ಪ್ರಯೋಗಗಳು ನಡೆದಿದ್ದು ಇದರ ದೂರಗಾಮಿ ಪರಿಣಾಮದ ಬಗ್ಗೆ ಚಿಂತಿಸದೆ ಇಂದು ನಮ್ಮ ಮಣ್ಣೆಲ್ಲ ಹುಳಿಯಾಗಿದೆ ಎಂದು ಬೆಳ್ತಂಗಡಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕರಾದ ಜಿ.ವಿ. ಮನೋರಮಾ ಭಟ್ ಅಭಿಪ್ರಾಯಪಟ್ಟರು.
ಇಂದು ವಾರ್ತಾ ಇಲಾಖೆ, ಕೃಷಿ ಇಲಾಖೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಸಾವಯವ ಕೃಷಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡು ತ್ತಿದ್ದರು.
ಕೃಷಿ ಪ್ರಧಾನ ದೇಶವಾದ ನಮ್ಮಲ್ಲಿ ಕೃಷಿಕರು ಇನ್ನೂ ಸ್ವಾವಲಂಬಿಗಳಾಗಿಲ್ಲ; ತಮ್ಮ ಬಗ್ಗೆ ತಮ್ಮ ಉದ್ಯೋಗದ ಬಗ್ಗೆ ಸ್ವವಿವೇಚನೆಯಿಂದ ಚಿಂತಿಸದೆ; ಕಾಲದೊಂದಿಗೆ ಹೆಜ್ಜೆ ಹಾಕಿ ಬದುಕುವ ಬಗ್ಗೆ ಚಿಂತನೆ ಮಾಡದೆ, ಅನುಭವದಿಂದ ಕಲಿಯದೆ ಕೃಷಿಕ ಸೋಲುತ್ತಿದ್ದಾನೆ. ಹಸಿರು ಕ್ರಾಂತಿಯ ಹೆಚ್ಚಿನ ಫಲ ಮತ್ತು ಲಾಭ ಹಾಗೂ ಸಬ್ಸಿಡಿಗಳು ರಾಸಾಯಿನಿಕ ಗೊಬ್ಬರಗಳ ಮಾರಾಟಗಾರರಿಗೇ ದೊರೆತವೇ ವಿನ: ಕೃಷಿಕನಿಗೆ ದೊರೆಯಲಿಲ್ಲ ಎಂದು ವಿಷಾದಿಸಿದ ಅವರು, ಆರ್ಥಿಕ ಹಿಂಜರಿತದ ಕಾಲಘಟ್ಟದಲ್ಲಿ ನಾವಿಂದು ಮತ್ತೆ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಆರಂಭಿಸಿದ್ದೇವೆ. ತರಬೇತಿಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಹೆಚ್ಚಾಗಿದ್ದು, ಕೃಷಿ ಕ್ಷೇತ್ರದಲ್ಲಿ ಯುವಶಕ್ತಿಯ ಪ್ರವೇಶ ಆಶಾದಾಯಕ ಬೆಳವಣಿಗೆ ಎಂದರು.
ಕೃಷಿಯನ್ನು ಖುಷಿಯಿಂದ ಸವಾಲಾಗಿ ಸ್ವೀಕರಿಸಿ ಲಾಭದಾಯಕವನ್ನಾಗಿ ಮಾರ್ಪಾಡಿಸುವ ಅಗತ್ಯವನ್ನು ಪ್ರತಿಪಾದಿಸಿದ ಅವರು ಕೃಷಿ ಭೂಮಿ, ಕೃಷಿಕರು ಜಾಸ್ತಿ ಇರುವ ನಮ್ಮ ಭೂಮಿಯಲ್ಲಿ ಕೃಷಿಕರಿಗೆ ಪ್ರಥಮ ಪ್ರಾಶಸ್ತ್ಯ ಸಿಗುವಂತಾಗಬೇಕು ಎಂದರು.
ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಕೃಷಿ ನಿರ್ದೇಶಕರಾದ ಮನೋಜ್ ಮಿನೇಜಸ್ ಅವರು ಕೃಷಿಕರಿಗೆ ಸಾವಯವ ಕೃಷಿಯ ಬಗ್ಗೆ, ಗೊಬ್ಬರ ಉತ್ಪಾದಿಸುವ ಬಗ್ಗೆ, ಉಪಬೆಳೆಗಳನ್ನು ಬೆಳೆಯುವ ಬಗ್ಗೆ ಸ್ಲೈಡ್ ಷೋ ಮೂಲಕ ಕೃಷಿಕರಿಗೆ ವಿವರಿಸಿ ದರು.ನಂತರ ಕೃಷಿಕರೊಂದಿಗೆ ಸಂವಾದ ನಡೆಯಿತು. ಸಂಕಿರಣದ ಅಧ್ಯಕ್ಷತೆಯನ್ನು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರಾದ ಡಾ. ಜಿ.ಟಿ.ಪುತ್ರ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕರಾದ ಕೆ.ವಿದ್ಯಾನಂದ ಅವರು ಉಪಸ್ಥಿತರಿದ್ದರು.ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.