Saturday, August 15, 2009

ಕರಾವಳಿಯ ಅಭಿವೃದ್ಧಿಗೆ ವಿಶೇಷ ಆದ್ಯತೆ: ಸ್ವಾತಂತ್ರ್ಯೋತ್ಸವ ಸಂದೇಶ

ಮಂಗಳೂರು,ಆ.15: ಕರಾವಳಿಯ ಸಮಗ್ರ ಅಭಿವೃದ್ಧಿಗೆ ಬಜೆಟ್ ನಲ್ಲಿ ವಿಶೇಷ ಆದ್ಯತೆಯನ್ನು ನೀಡಲಾಗಿದ್ದು, ಮೀನುಗಾರರಿಗೆ, ಒಳನಾಡು ರಸ್ತೆ ಅಭಿವೃದ್ಧಿಗೆ, ಗ್ರಾಮೀಣ ರಸ್ತೆ ದುರಸ್ತಿಗೆ, ಕುಡಿಯುವ ನೀರು ಸಮರ್ಪಕ ಸರಬರಾಜಿಗೆ, ರೈತರಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ,ಕೃಷಿಕರ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಿದ್ದು, ಸುವರ್ಣ ಗ್ರಾಮೋದಯ ಯೋಜನೆಯ ಮೂಲಕ ಜಿಲ್ಲೆಯ 32 ಗ್ರಾಮಗಳ ಸಮಗ್ರ ಅಭಿವೃದ್ಧಿಗೆ 3,100 ಲಕ್ಷ ರೂ.ಗಳನ್ನು ನಿಗದಿಗೊಳಿಸಿದ್ದು ರೂ.2,061 ಲಕ್ಷ ರೂ. ಬಿಡುಗಡೆ ಮಾಡಿದೆ ಎಂದು ಜೀವಿಶಾಸ್ತ್ರ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು.
63ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಂಗಳೂರಿನ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ,ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ರೂಪಿಸಿರುವ ಹಾಗೂ ಅನುಷ್ಠಾನಕ್ಕೆ ತಂದಿರುವ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ನೀಡಿದರು. ದೇಶವು 63ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದು, ಸ್ವಾತಂತ್ರ್ಯದ ಪರಿಕಲ್ಪನೆ ಸಾಕಾರಗೊಳ್ಳಲು, ಪ್ರತಿಯೊಬ್ಬ ಪ್ರಜೆಯೂ ಸ್ವಾತಂತ್ರ್ಯದ ಸವಿಯನ್ನು ಅನುಭವಿಸುವಂತಾಗಲು, ಕೃಷಿಕನಿಗೆ ಸೂಕ್ತ ಸ್ಥಾನ ಮಾನ ದೊರಕಿಸಲು ಸರ್ಕಾರ ರೂಪಿಸಿರುವ ಯೋಜನೆಗಳು, ನೇಗಿಲಯೋಗಿ ಗೀತೆಯನ್ನು ಎಲ್ಲಾ ಸರ್ಕಾರಿ ಸಮಾರಂಭಗಳಲ್ಲಿ ಹಾಡುವ ಉದ್ದೇಶವನ್ನು ಸಂದೇಶದಲ್ಲಿ ಪ್ರಸ್ತಾಪಿಸಿದರು.
ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾಗಾಂಧಿ ವೃದ್ಧಾಪ್ಯ ಯೋಜನೆ, ಅಂಗವಿಕಲ ವೇತನ, ವಿಧವಾ ವೇತನ,ಅಂತ್ಯ ಸಂಸ್ಕಾರ ಸಹಾಯಧನ, ಆದರ್ಶ ವಿವಾಹ ಯೋಜನೆ, ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯಲ್ಲಿ 17352 ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯವನ್ನು ವಿತರಿಸಲಾಗಿದೆ ಎಂದರು.
ಸಾರ್ವಜನಿಕ ಸ್ನೇಹಿ ಆಡಳಿತ ಸರ್ಕಾರದ ಪ್ರಥಮ ಆದ್ಯತೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕಂದಾಯ ಇಲಾಖೆ ಇತರರಿಗಿಂತ ಒಂದು ಹೆಜ್ಚೆ ಮುಂದಿದ್ದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತೀ ತಿಂಗಳ 3ನೇ ಶನಿವಾರ ಮಧ್ಯಾಹ್ನ ಕಂದಾಯ ಸಹಾಯವಾಣಿ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಲಿದೆ ಎಂದರು.ಪ್ರತಿಯೊಬ್ಬ ಪ್ರಜೆಯ ಸುಖ ದು:ಖಗಳಿಗೆ ಸರ್ಕಾರ ಸ್ಪಂದಿಸುವುದಲ್ಲದೆ, ಶಾಂತಿ ಸೌಹಾರ್ದಯುತ ಬಾಳ್ವೆಗೆ ಅಗತ್ಯ ವಾತಾವರಣ ನಿರ್ಮಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ನಂತರ ನಡೆದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು. ಮೀನುಗಾರರಾದ ಲೋಕೇಶ್ ವಿ. ಪುತ್ರನ್ ಅವರಿಗೆ 5 ಜನರ ಪ್ರಾಣ ಉಳಿಸಿದ್ದಕ್ಕೆ ವಿಶೇಷ ಪ್ರಶಸ್ತಿ ಮತ್ತು ಇತ್ತೀಚೆಗೆ ಮಂಗಳೂರಿನ ಟ್ರೇಡ್ ಸೆಂಟರ್ ನಲ್ಲಿ ತಮ್ಮ ಧೈರ್ಯ ಮತ್ತು ಸಾಹಸ ಮೆರೆದ ಅಗ್ನಿ ಶಾಮಕ ಪಡೆಯ ಮುಖ್ಯಸ್ಥರನ್ನು ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.