ಮಂಗಳೂರು,ಆ.7:1930ರಲ್ಲಿ ರಾಷ್ಟ್ರ ಕವಿ ಕುವೆಂಪು ಅವರು ರಚಿಸಿದ ನೇಗಿಲಯೋಗಿ ಪದ್ಯವನ್ನು ನಾಡ ರೈತಗೀತೆಯಾಗಿ ನಾಡಿಗೆ ಸಮರ್ಪಿಸುತ್ತಿದ್ದು, ಆಗಸ್ಟ್ 15 ಸ್ವಾತಂತ್ರ್ಯೋತ್ಸವದಂದು ಮತ್ತು ಎಲ್ಲಾ ರಾಷ್ಟ್ರೀಯ ಮತ್ತು ನಾಡಹಬ್ಬಗಳಂದು ಹಾಗೂ ಸರ್ಕಾರದ ಎಲ್ಲಾ ಕಾರ್ಯಕ್ರಮದಲ್ಲಿ ನೇಗಿಲಯೋಗಿ ಗೀತೆಯನ್ನು ಹಾಡಲು ಸರ್ಕಾರ ಆದೇಶ ಹೊರಡಿಸಲಿದೆ ಎಂದು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ.ಆನಂದ ಆ.ಶ್ರೀ ತಿಳಿಸಿದರು.
ಅವರು ಇಂದು ನಗರದಲ್ಲಿ(7.8.09) ಈ ಸಂಬಂಧ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಗಸ್ಟ್ 15ರಂದು ಆಯಾ ತಾಲೂಕಿನ ಗಾಯಕರಿಂದ ತಾಲೂಕಿನ ಶಾಲಾ- ಕಾಲೇಜುಗಳ ಕನಿಷ್ಠ 1,000 ಮಕ್ಕಳಿಗೆ ಈ ಹಾಡನ್ನು ಧ್ವಜಾರೋಹಣದ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮುನ್ನ ಮೊದಲ ಗೀತೆಯಾಗಿ ಹಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದ ಅವರು, ನಾಡಿನಲ್ಲಿ ಒಟ್ಟಾರೆ ಒಂದೂವರೆ ಲಕ್ಷ ಮಕ್ಕಳು ನೇಗಿಲ ಯೋಗಿ ಗೀತೆಯನ್ನು ಹಾಡಲಿದ್ದು, ನಮ್ಮ ರೈತರಿಗೆ ವಿಶಿಷ್ಟ ಗೌರವ ಹಾಗೂ ಚೈತನ್ಯ ಗೀತೆಯಾಗಿ ಈ ಹಾಡನ್ನು ಸಮರ್ಪಿಸಲಿದ್ದೇವೆ ಎಂದು ವಿವರಿಸಿದರು.
ಈ ಹಾಡಿನ ಮೂಲಕ ಭರವಸೆಯ ಬೀಜವನ್ನು ಬಿತ್ತುವ ಭಾವನೆ ಸಾವಯವಕೃಷಿ ಮಿಷನ್ ನದ್ದಾಗಿದ್ದು, ರೈತನಲ್ಲಿ ಯೋಗಿಯ ಮಾನಸಿಕತೆ ತುಂಬಲು, ರೈತಕ್ಷೇತ್ರ ಬೆಳೆಯಲು ಪೂರಕವಾಗಿ,ಅನ್ನ ತಿನ್ನುವ ಪ್ರತಿಯೊಬ್ಬನು ರೈತನನ್ನು ಸ್ಮರಿಸುವಂತಾಗಲು ಈ ನೇಗಿಲಯೋಗಿ ಗೀತೆ ಕಾರಣವಾಗಲಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಸಾವಯವ ಕೃಷಿ ಮಿಷನ್ ಸಾಧನೆ: ರಾಜ್ಯದಲ್ಲಿ ಸಾವಯವ ಕೃಷಿ ಮಿಷನ್ ಇದುವರೆಗೆ 52,000 ಕುಟುಂಬಗಳ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿದ್ದು, ಒಟ್ಟು 174 ತಾಲೂಕುಗಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ. ಕಳೆದ ಸಾಲಿನಲ್ಲಿ 42.14 ಕೋಟಿ ರೂ.ಗಳ ಸಹಾಯಧನವನ್ನು 174 ಕೇಂದ್ರಗಳ 19 ಘಟಕಗಳಿಗೆ ನೀಡಲಾಗಿದೆ. ಪ್ರತಿ ತಾಲೂಕಿನಿಂದ 300 ಕುಟುಂಬಗಳು ಒಂದು ಸಂಸ್ಥೆಯಂತೆ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು 300 ಕುಟುಂಬಗಳಿಗೆ 15 ಜನ ಪ್ರೇರಕರು ಮೂವರು ಮುಖ್ಯಸ್ಥರು ಇರುವಂತಹ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಸೆಪ್ಟೆಂಬರ್ 28ರ ವಿಜಯದಶಮಿಯಂದು ರಾಜ್ಯದ 174 ತಾಲೂಕು ಕೇಂದ್ರಗಳಲ್ಲಿ ರೈತರೇ ನಿರ್ವಹಿಸುವ ಸಾವಯವ ಕೃಷಿ ವಿನಿಮಯ ಕೇಂದ್ರವನ್ನು ಆರಂಭಿಸಲಾಗುವುದು ಎಂದ ಅವರು,ಉತ್ಪಾದಕ ಮತ್ತು ಗ್ರಾಹಕ ಎಂಬ ಸಂಬಂಧದಲ್ಲಿ ಪರಿವರ್ತನೆಯನ್ನು ತರುವುದೇ ಇದರ ಮುಖ್ಯ ಉದ್ದೇಶ ಎಂದರು.ಎಲ್ಲವನ್ನೂ ಹಣದ ಮುಖಾಂತರ ಅಳೆಯದೆ ಅನ್ನದಾತನನ್ನು ಗೌರವಿಸುವುದು, ಅದೇ ರೀತಿ ಅನ್ನದಾತ ಕೇವಲ ಲಾಭವನ್ನು ನೋಡದೆ ರಾಸಾಯಿನಿಕ ಗೊಬ್ಬರ ಬಳಸದೆ ತಾನು ಕೈತೋಟದಲ್ಲಿ ತನಗೋಸ್ಕರ ಬೆಳೆಯುವಂತದ್ದನ್ನೇ ಗ್ರಾಹಕನಿಗೆ ನೀಡುವ ಬಗ್ಗೆ ಯೋಚಿಸುವಂತೆ ಮಾಡುವುದೇ ಸಾವಯವ ಕೃಷಿ ಮಿಷನ್ ನ ಉದ್ದೇಶ ಎಂದು ಅವರು ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಶ್ರೀ ವತ್ಸ, ಅರುಣ್, ಜಂಟಿ ಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್, ರಾಜ್ಯ ಸಮಿತಿ ಸದಸ್ಯ ಬಿ.ಕೆ. ರಮೇಶ್ ಅವರು ಉಪಸ್ಥಿತರಿದ್ದರು.