ಮಂಗಳೂರು,ಆ.11:ಜಲಾನಯನ,ತೋಟಗಾರಿಕೆ, ಸಾಮಾಜಿಕ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆಗಳು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕ ಯೋಜನೆಗಳನ್ನು ಹಮ್ಮಿಕೊಂಡು ಮಾನವಶಕ್ತಿಯ ಸದ್ಬಳಕೆಗೆ ನೂತನ ಮಾದರಿಯನ್ನು ಹಾಕಿಕೊಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶಿವಶಂಕರ್ ಅವರು ಹೇಳಿದರು.ಅವರು ಇಂದು ಜಿಲ್ಲಾಪಂಚಾಯತ್ ನ ಸಭಾಂಗಣದಲ್ಲಿ ಏರ್ಪಡಿಸಲಾದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಸಮೀಕ್ಷಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಜಿಲ್ಲಾ ಪಂಚಾಯತ್ ವಿಭಾಗದಡಿ ಬರುವ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ ಅವರು, ಈ ಸಂಬಂಧ ಇಲಾಖೆಗಳ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರಲ್ಲದೆ, ಜಲಾನಯನ ಇಲಾಖೆಯವರು ಸುವರ್ಣ ಕೃಷಿ ಹೊಂಡದಂತಹ ಯೋಜನೆಗಳ ಮೂಲಕ ಹಾಗೂ ಶಿಕ್ಷಣ ಇಲಾಖೆ ಸರ್ವ ಶಿಕ್ಷಣ ಅಭಿಯಾನದಡಿ ಕಟ್ಟಡಗಳ ನಿರ್ಮಾಣದ ಸಂದರ್ಬದಲ್ಲಿ ಮಾನವಶಕ್ತಿಯನ್ನು ಬಳಸುವಂತೆ ಮಾರ್ಗದರ್ಶನ ನೀಡಿದ ಅವರು, ಸರ್ಕಾರದ ವಿನೂತನ ಜನಪರ ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ಯೋಜನೆ ರೂಪಿಸಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ಮಾಡಿದರು. ಮುಖ್ಯವಾಗಿ ಕಾರ್ಯನಿರ್ವಹಣಾಧಿಕಾರಿಗಳು ಈ ನಿಟ್ಟಿನಲ್ಲಿ ಇನ್ನಷ್ಟು ಶ್ರಮವಹಿಸಿ ಕೆಲಸಮಾಡಬೇಕೆಂದರು.
ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಬಗ್ಗೆ 07-08ನೇ ಸಾಲಿನ ಯೋಜನೆಗಳು ಆಗಸ್ಟ ಅಂತ್ಯದೊಳಗೆ ಸಂಪೂರ್ಣ ಗೊಂಡಿರಬೇಕು ಎಂದು ಆದೇಶಿಸಿದ ಅವರು, 08-09ನೇ ಸಾಲಿನಲ್ಲಿ ರೆಜಿಸ್ಟ್ರೇಷನ್ ಮತ್ತಿತರ ಸಮಸ್ಯೆಗಳಿಗೆ ಸೆಪ್ಟೆಂಬರ್ ಅಂತ್ಯದೊಳಗೆ ಪರಿಹಾರ ದೊರೆಯಬೇಕು ಎಂದು ಸೂಚಿಸಿದರು. ಸಣ್ಣ ನೀರಾವರಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 309.37 ಹೆಕ್ಟೇರ್ ನೀರಾವರಿಗೆ ಗುರಿ ನಿಗದಿಯಾಗಿದ್ದು, 7ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಇದರಲ್ಲಿ 5 ಸಂಪೂರ್ಣಗೊಂಡಿದ್ದು, 274.5 ಹೆಕ್ಟೇರ್ ನೀರಾವರಿ ಗುರಿಯನ್ನು ಸಾಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಯೋಜನೆಯಡಿ ಪುತ್ತೂರು ಮತ್ತು ಮಂಗಳೂರು ತಾಲೂಕುಗಳು ಮಾತ್ರ ಆಯ್ಕೆಯಾಗಿರುವ ಬಗ್ಗೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಇಂದಿನಿಂದ ಮಂಗಳೂರು ತಾಲೂಕಿನಲ್ಲಿ ಬಿಪಿ ಎಲ್ ಕಾರ್ಡುಗಳ ವಿತರಣೆಯಾಗುತ್ತಿರುವ ಬಗ್ಗೆ ಹಾಗೂ ಕಾರ್ಡ್ ಗಳನ್ನು ವಿತರಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಯ ಬಗ್ಗೆ ಆಹಾರ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ತಾಲೂಕು ಕೆಡಿಪಿಗಳಲ್ಲಿ ನಿರ್ಣಯ ಅಂಗೀಕರಿಸಿ ಜಿಲ್ಲಾ ಪಂಚಾಯತ್ ಗೆ ಕಳುಹಿಸಿಕೊಡಲು ಸಿಇಒ ಸೂಚಿಸಿದರು.
ಸಂಪೂರ್ಣ ಸ್ವಚ್ಛತಾ ಆಂದೋಲನದ ಬಗ್ಗೆ ವಿವಿಧ ಇಲಾಖೆಗಳ ವೈಯಕ್ತಿಕ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವ ಬಗ್ಗೆ, ಅಂಗವಿಕಲ ಕಲ್ಯಾಣ ಇಲಾಖೆ ಶೇ. 3 ರಷ್ಟು ಫಲಾನುಭವಿಗಳನ್ನು ವಿವಿಧ ಇಲಾಖೆಗಳು ಗುರುತಿಸಿ ನೀಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಅಸ್ಥೆ ವಹಿಸಬೇಕೆಂದು ಸಿ ಇ ಒ ಹೇಳಿದರು.
ಕೃಷಿ ಇಲಾಖೆಯಿಂದ ಸುಫಲಾ 900 ಟನ್ ಬಿಡುಗಡೆಯಾಗಿದ್ದು, ಕಾಂಪ್ಲೆಕ್ಸ್ ಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಕೆಯ ಬಗ್ಗೆ ಕೃಷಿಕರಿಗೆ ಸಾಕಷ್ಟು ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್ ಅವರು ತಿಳಿಸಿದರು.ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ದಿನಗೂಲಿ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಹಾಗೂ ಸಂಸ್ಥೆಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸುತ್ತಿಲ್ಲ; ಆದರೆ ಮನೆಗಳಲ್ಲಿ ಬಾಲಕಾರ್ಮಿಕರನ್ನು ದುಡಿಸು ಕೊಳ್ಳುತ್ತಿರುವ ಬಗ್ಗೆ ಬಂದ ದೂರುಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗಿದ್ದು, ದೂರು ಬಂದರೆ ಕ್ರಮಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.
ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಮಕ್ಕಳಿಗೆ ನೀಡುತ್ತಿರುವ ಸವಲತ್ತುಗಳ ಬಗ್ಗೆ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಾಹಿತಿ ನೀಡಿದರು. ಕಳೆದ ಸಾಲಿನಲ್ಲಿ ಈ ಯೋಜನೆಯಡಿ 30ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡಿರುವುದಾಗಿ ಹೇಳಿದರು. ಈ ಯೋಜನೆಯಿಂದ ಒಂದನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಬಹಳಷ್ಟು ಅನುಕೂಲವಾಗಿದೆ ಎಂದೂ ಅವರು ಹೇಳಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಮಸ್ಯೆಯಾಗಿರುವ ಎಚ್ 1 ಎನ್ 1 ಸೋಂಕು ರೋಗ ಮಲೇಷಿಯಾದ ವಿದ್ಯಾರ್ಥಿಗಳಿಂದ ಜಿಲ್ಲೆಗೆ ಬಂದಿದ್ದು, ರೋಗ ತಡೆಗೆ ಮತ್ತು ಶುಶ್ರೂಷೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ; ಜನರು ಭಯಪಡುವ ಅಗತ್ಯವಿಲ್ಲ ಎಂದೂ ಅವರು ಸಭೆಗೆ ತಿಳಿಸಿದರು.ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಸದಾನಂದ ಮಲ್ಲಿ, ಉಪಕಾರ್ಯದರ್ಶಿ ಪ್ರಾಣೇಶ್, ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಉಪಸ್ಥಿತರಿದ್ದರು.